ಕ್ರೀಡಾಕೂಟಗಳಿಂದ ನೌಕರರಲ್ಲಿನ ಒತ್ತಡ ನಿರ್ವಹಣೆ ಸಾಧ್ಯ: ಭುವನೇಶ ಪಾಟೀಲ

| Published : Mar 01 2025, 01:04 AM IST

ಕ್ರೀಡಾಕೂಟಗಳಿಂದ ನೌಕರರಲ್ಲಿನ ಒತ್ತಡ ನಿರ್ವಹಣೆ ಸಾಧ್ಯ: ಭುವನೇಶ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ನೌಕರರಿಗೆ ಒತ್ತಡದ ಜೀವನದಿಂದ ಸ್ವಲ್ಪ ವಿಶ್ರಾಂತಿ ನೀಡಿದಂತಾಗುತ್ತದೆ ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.

ಧಾರವಾಡ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ನೌಕರರು ವರ್ಷದ ಬಹುತೇಕ ಎಲ್ಲ ದಿನಗಳಲ್ಲಿ ಕೆಲಸದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅದರಲ್ಲಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ನೌಕರರಿಗೆ ಒತ್ತಡದ ಜೀವನದಿಂದ ಸ್ವಲ್ಪ ವಿಶ್ರಾಂತಿ ನೀಡಿದಂತಾಗುತ್ತದೆ ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ 2024-25ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಹಬ್ಬದಲ್ಲಿ ಮಾತನಾಡಿದರು.

ಆಟದಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಇಲ್ಲಿ ಸೇರಿದಂತಹ ಎಲ್ಲ ವೃಂದದ ನೌಕರರು ಆಟಗಳಲ್ಲಿ ಭಾಗವಹಿಸಬೇಕು. ಕ್ರೀಡಾಕೂಟದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದರು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಕ್ರೀಡೆಯಲ್ಲಿ ಎಲ್ಲರೂ ಭಾಗವಹಿಸುವುದು ಅತಿ ಮುಖ್ಯ. ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಸರ್ಕಾರಿ ನೌಕರರು ತಮ್ಮ ಕರ್ತವ್ಯದೊಂದಿಗೆ ಕ್ರೀಡೆ, ಯೋಗ ಹಾಗೂ ವ್ಯಾಯಾಮಗಳಿಗೆ ಸಮಯ ಕೊಡುವುದು ಅತೀ ಮುಖ್ಯ ಎಂದು ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ಸ್ವಾಗತಿಸಿದರು. ಜಿಪಂ ಸಿಇಒ ಭುವನೇಶ ಪತ್ನಿ ಗರೀಮಾ ಪನ್ವಾರ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಎಸ್.ಎಫ್. ಸಿದ್ಧನಗೌಡರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಟಿ. ಮಂಜುನಾಥಸ್ವಾಮಿ ಇದ್ದರು.