ಸಾರಾಂಶ
ಶಿವಮೊಗ್ಗ: ಒತ್ತಡ ನಿವಾರಣೆ, ಒಗ್ಗಟ್ಟು, ಆರೋಗ್ಯ ವರ್ಧನೆಗೆ ಕ್ರೀಡಾಕೂಟಗಳು ಸಹಕಾರಿ ಎಂದು ಶಾಸಕ ಎಸ್.ಎನ್.ಚೆನ್ನಬಸಪ್ಪ ಹೇಳಿದರು.ಜವಳಿ ವರ್ತಕರ ಸಂಘದ ಆಶ್ರಯದಲ್ಲಿ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಸಂಘದ ಸದಸ್ಯರಿಗಾಗಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಕೇವಲ ದೈಹಿಕ, ಮಾನಸಿಕ ಆರೋಗ್ಯ ಮಾತ್ರ ಸುಧಾರಿಸುವುದಲ್ಲದೆ, ಆತ್ಮವಿಶ್ವಾಸ, ತಾಳ್ಮೆ, ತಂತ್ರಗಾರಿಕೆ, ಸಾಮಾಜಿಕ ಜವಾಬ್ದಾರಿ, ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಕೂಡ ಕಲಿಯಬಹುದಾಗಿದೆ ಎಂದು ತಿಳಿಸಿದರು. ವರ್ತಕ ಸಮುದಾಯದವರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಅವರಲ್ಲಿನ ದೈನಂದಿನ ಒತ್ತಡಗಳು ದೂರವಾಗಿ, ಪರಸ್ಪರ ಸಹಕಾರ ಮನೋಭಾವಗಳು ಬೆಸೆಯುತ್ತವೆ. ವಿಶೇಷವಾಗಿ ಮನರಂಜನೆ ದೊರೆತು ವಯಸ್ಸನ್ನು ಮರೆಸಿ ಬಿಡುತ್ತವೆ. ಆದ್ದರಿಂದ ಕಡ್ಡಾಯವಾಗಿ ಪ್ರತಿಯೊಬ್ಬರೂ ವೈಯಕ್ತಿಕ ಆಸಕ್ತಿಗಳಿಗೆ ಅನುಗುಣವಾಗಿ ಒಂದಾದರೂ ಕ್ರೀಡೆಗಳನ್ನು ಆಯ್ದುಕೊಂಡು ದೈನಂದಿನ ದಿನಚರಿಯ ಭಾಗವಾಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಇದೇ ವೇಳೆ ಅಥ್ಲೆಟಿಕ್ಸ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಡಿವಿಎಸ್ ಕಾಲೇಜು ವಿದ್ಯಾರ್ಥಿನಿಯರಾದ ಅಭಿಜ್ಞಾ ಮತ್ತು ಅನುಷಾ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು. ಸಂಘದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷರಾದ ಸುರೇಶ್ ಕುಮಾರ್ ಮತ್ತು ಪದಾಧಿಕಾರಿಗಳು ಹಾಜರಿದ್ದರು. ಕ್ರೀಡಾ ಸಂಚಾಲಕರಾದ ಜಾನ್ ಭಾಸ್ಕರ್ ರವರು ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದರು.