ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ವಿಶ್ವದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ರೀಡೆ ಒಂದು ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿದ್ದು, ಕ್ರೀಡೆಯ ಮೂಲಕ ವೈಯಕ್ತಿಕ ಹಾಗೂ ದೇಶದ ಆರ್ಥಿಕತೆಗೆ ಕೋಟ್ಯಾಂತರ ರು. ಹಣ ಲಾಭವಾಗುತ್ತಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಡುತ್ತಿದೆ ಎಂದು ರಾಜ್ಯ ಖೊ- ಖೋ ಫೆಡರೇಷನ್ ಅಧ್ಯಕ್ಷ ಹಾಗೂ ನ್ಯಾಷನಲ್ ಖೋ- ಖೋ ಸಂಸ್ಥೆ ಉಪಾಧ್ಯಕ್ಷ ಲೋಕೇಶ್ವರ್ ತಿಳಿಸಿದರು.ನಗರದ ಕಲ್ಪತರು ಆಡಿಟೋರಿಯಂನಲ್ಲಿ ಟೈಮ್ಸ್ ಕಾಲೇಜು ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ಕೇವಲ ಮನರಂಜನೆಗಾಗಿ ಮಾತ್ರ ಎಂಬುದು ತಪ್ಪು ತಿಳಿವಳಿಕೆ. ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗ, ಮಗುವೊಂದು ಹುಟ್ಟುತ್ತಲೇ ತನ್ನದೇ ಆದ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತದೆ ಹಾಗೂ ಕ್ರೀಡೆ ಪ್ರತಿಯೊಬ್ಬರಿಗೂ ಅವಶ್ಯಕ ಎಂಬುದನ್ನು ಸಮಾಜ ಒಪ್ಪಿಕೊಳ್ಳಬೇಕು. ಕ್ರೀಡೆಗೆ 100 ರು. ಖರ್ಚು ಮಾಡಿದರೆ ೧೦೦೦ ರು. ವಾಪಸ್ ಬರುತ್ತದೆ ಎಂದು ಎಲ್ಲ ದೇಶಗಳಿಗೂ ತಿಳಿದಿದ್ದು ಪ್ರೋತ್ಸಾಹ ಸಿಗುತ್ತಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಕ್ರೀಡೆಗೆ ಹೆಚ್ಚು ಒತ್ತು ನೀಡಿ ಸಕಲ ಸೌಲತ್ತುಗಳನ್ನು ಒದಗಿಸಿಕೊಡುತ್ತಿದ್ದಾರೆ. ಈಗ ಕ್ರೀಡೆ ಒಂದು ಉದ್ದಿಮೆಯ ರೂಪ ತಾಳಿರುವುದಲ್ಲದೆ, ದೇಶದ ಶಕ್ತಿ ತೋರಿಸುವ ಸಾಧನವಾಗಿದೆ. ೨೦೪೬ರವರೆಗೂ ಒಲಿಂಪಿಕ್ ಕ್ರೀಡಾಕೂಟಗಳು ಹಲವಾರು ದೇಶಗಳಿಗೆ ಈಗಾಗಲೇ ಬುಕ್ ಆಗಿವೆ. ದೇಶದಲ್ಲಿ ಒಲಿಂಪಿಕ್ ಕ್ರೀಡೆ ನಡೆದರೆ ದೇಶ ಸಂಪದ್ಭರಿತ ಎಂದು ತಿಳಿದಿರುವ ದೇಶಗಳು ಒಲಂಪಿಕ್ ಪ್ರಾಯೋಜಿಸಲು ಮುಗಿಬಿದ್ದಿವೆ. ಈಗ ಅಲ್ಟಿಮೇಟ್ ಖೊಖೋ ಪಂದ್ಯಾವಳಿ ಪ್ರಾರಂಭವಾಗಲಿದ್ದು, ಇದರ ಮೂಲಕ ಕ್ರೀಡಾಪಟುಗಳು ತಿಂಗಳಿಗೆ ೨೫ ರಿಂದ ೩೦ ಲಕ್ಷ ಹಣ ಸಂಪಾದಿಸಲಿದ್ದಾರೆ. ಆದ್ದರಿಂದ ಕ್ರೀಡೆ ಈಗ ಕೇವಲ ಟೈಂಪಾಸ್ ಅಲ್ಲ ಗಳಿಕೆಯ ಮಾರ್ಗವೂ ಆಗಿದೆ ಎಂದು ತಿಳಿಸಿದರು.
ಟೈಮ್ಸ್ ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಗಂಗಾಧರ್ ಮಾತನಾಡಿ, ದೇಶದಲ್ಲಿ ಒಲಂಪಿಕ್ ಕ್ರೀಡೆ ನಡೆದರೆ ದೇಶದ ಜಿಡಿಪಿ ಹೆಚ್ಚಾಗುತ್ತದೆ. ಅದು ಕ್ರೀಡೆಯ ತಾಕತ್ತು. ಭಾರತದಲ್ಲಿ ಎಲ್ಲ ಪೋಷಕರು ನಮ್ಮ ಮಗ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಆಗಬೇಕೆಂದು ಬಯಸುತ್ತಾರೆ. ಆದರೆ ಕ್ರೀಡೆಗೆ ಮಕ್ಕಳನ್ನು ಸೇರಿಸುವುದಿಲ್ಲ. ಆದ್ದರಿಂದ 140 ಕೋಟಿ ಜನಸಂಖ್ಯೆ ಇದ್ದರೂ ದೇಶಕ್ಕೆ ಕೇವಲ ಬೆರಳೆಣಿಕೆಯಷ್ಡು ಪದಕಗಳು ಮಾತ್ರ ಬರುತ್ತಿವೆ. ದೇಶದಲ್ಲಿ ಏಮ್ಸ್ ಸರ್ವೇ ಪ್ರಕಾರ ಪ್ರತಿ 10 ಮಕ್ಕಳಲ್ಲಿ ಇಬ್ಬರಿಗೆ ಡಯಾಬಿಟಿಸ್ ಇದೆ. ಎಲ್ಲ ಮಕ್ಕಳಿಗೂ ಕ್ರೀಡೆ ಕಡ್ಡಾಯ ಮಾಡಿದರೆ ಆರೋಗ್ಯ ಸುಧಾರಣೆ ಜೊತೆಗೆ ಲವಲವಿಕೆಯಿಂದ ಇರುತ್ತಾರೆ. ಮಕ್ಕಳ ಪೋಷಕರೂ ಸಹ ಕ್ರೀಡೆಗೆ ಹೆಚ್ಚು ಒತ್ತು ನೀಡಿ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ತಿಳಿಸಬೇಕಿದೆ ಎಂದು ಸಲಹೆ ನೀಡಿದರು.ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಜಿ.ಪಿ.ದೀಪಕ್ ಮತ್ತು ಕಾರ್ಯದರ್ಶಿಗಳಾದ ಎಂ.ಆರ್. ಸಂಗಮೇಶ್, ಎಚ್.ಜಿ.ಸುಧಾಕರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಈ.ರಮೇಶ್ ಮಾತನಾಡಿ, ಕಾಲೇಜುಗಳಲ್ಲಿ ಸಿಇಟಿ, ನೀಟ್ ಫಲಿತಾಂಶಕ್ಕೆ ಕಟ್ಟುಬಿದ್ದು ಮಕ್ಕಳನ್ನು ಯಾರೂ ಕ್ರೀಡೆಗೆ ಕಳಿಸುತ್ತಿಲ್ಲ. ಪಠ್ಯದಷ್ಟೇ ಕ್ರೀಡೆಯೂ ಮಹತ್ವದ್ದಾಗಿದ್ದರೂ ಇದನ್ನು ತಿಳಿದುಕೊಳ್ಳುತ್ತಿಲ್ಲ. ಮಕ್ಕಳು ಹೆಚ್ಚು ಆಟಗಳಲ್ಲಿ ಭಾಗಿಯಾಗುವುದರಿಂದ ಆರೋಗ್ಯವಂತರಾಗಿರುತ್ತಾರೆ. ಕ್ರೀಡೆಗೆ ಓದಿನಷ್ಟೇ ಮಹತ್ವ ನೀಡಲಾಗುತ್ತಿದೆ ಎಂದರು.
ಹಿರಿಯ ದೈಹಿಕ ನಿರ್ದೇಶಕರು ಹಾಗೂ ತರಬೇತುದಾರ ನಂಜೇಗೌಡ ಹಾಗೂ ಚಂದ್ರಶೇಖರ್ ಸೇರಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ದೈಹಿಕ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಗೆದ್ದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಬಾಲಕರ ಕಾಲೇಜಿನ ಪ್ರಾಂಶುಪಾಲ ಹಾಗೂ ನೋಡಲ್ ಅಧಿಕಾರಿ ಎಂ.ಡಿ.ಶಿವಕುಮಾರ್, ಟೈಮ್ಸ್ ಕಾಲೇಜು ಪ್ರಾಂಶುಪಾಲ ಪ್ರದೀಪ್, ಆಡಳಿತಾಧಿಕಾರಿ ಅನೂಪ್ ಮತ್ತಿತರರಿದ್ದರು.