ಸಾರಾಂಶ
ಚಳ್ಳಕೆರೆ ನಗರದ ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಪ್ರಸ್ತುತ 2025-26ನೇ ಸಾಲಿನ ಪದವಿಪೂರ್ವ ಕಾಲೇಜು ವಾರ್ಷಿಕ ಕ್ರೀಡಾಕೂಟವನ್ನು ಡಿಡಿಪಿಐ ಕೆ.ತಿಮ್ಮಯ್ಯ ಉದ್ಘಾಟಿಸಿದರು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ಉತ್ತಮ ಕ್ರೀಡಾಪಟು ತನ್ನ ಸಾಮರ್ಥ್ಯದಿಂದ ಪಂದ್ಯ ಗೆಲ್ಲುವುದಲ್ಲದೆ, ಜೀವನವನ್ನೂ ರೂಪಿಸಿಕೊಳ್ಳುವಂತಹ ಶಕ್ತಿ ಪಡೆಯುತ್ತಾನೆ. ಕ್ರೀಡಾ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆಯೊಂದಿಗೆ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಕ್ರೀಡೆಯೂ ಸಹ ಶಿಕ್ಷಣ, ಸಂಸ್ಕಾರದ ಜೊತೆಗೆ ಬದುಕನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಪದವಿಪೂರ್ವ) ಕೆ.ತಿಮ್ಮಯ್ಯ ತಿಳಿಸಿದರು.ಮಂಗಳವಾರ ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಪ್ರಸ್ತುತ 2024-26ನೇ ಸಾಲಿನ ಪದವಿ ಪೂರ್ವ ಕಾಲೇಜು ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಪ್ರತಿ ವರ್ಷವೂ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ರೀಡೆಗಳನ್ನು ಏರ್ಪಡಿಸಿ ವಿಜೇತರಿಗೆ ಆರ್ಹತಾ ಪತ್ರ, ಬಹುಮಾನ ನೀಡಿ ಅವರ ಕ್ರೀಡಾಸ್ಫೂರ್ತಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಗರಸಭೆ ಅಧ್ಯಕ್ಷೆ ಬಿ.ಶಿಲ್ಪಮುರುಳಿ ಮಾತನಾಡಿ, ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣವನ್ನು ಎಷ್ಟು ಗಂಭೀರವಾಗಿ ಅಭ್ಯಾಸ ಮಾಡುತ್ತೇಯೋ ಅಷ್ಟೇ ಗಂಭೀರವಾಗಿ ಕ್ರೀಡಾಭ್ಯಾಸ ಮಾಡಬೇಕು. ಎಲ್ಲಾ ಕ್ರೀಡೆಗಳು ಇಂದು ವಿಶೇಷ ಮಹತ್ವವನ್ನು ಪಡೆದುಕೊಂಡಿವೆ. ಉತ್ತಮ ಕ್ರೀಡಾಪಟುವಿಗೆ ಸದಾಕಾಲ ಹೆಚ್ಚಿನ ಗೌರವ ಲಭಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಚ್‌ಪಿಪಿಸಿ ಕಾಲೇಜು ಪ್ರಾಂಶುಪಾಲ ಡಾ.ಎಂ.ಕೆ.ದೇವಪ್ಪ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರವಿ, ನಗರಸಭೆ ಉಪಾಧ್ಯಕ್ಷೆ ಕವಿತಾ ವೀರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ನಾಮಿನಿ ಸದಸ್ಯ ಆರ್.ವೀರಭದ್ರಪ್ಪ ಮುಂತಾದವರು ಭಾಗವಹಿಸಿದ್ದರು.