ಆರೋಗ್ಯ ಸಮಾಜ ನಿರ್ಮಿಸಲು ಕ್ರೀಡೆ ಸಹಕಾರಿ

| Published : Sep 15 2024, 01:54 AM IST

ಸಾರಾಂಶ

ಯುವಕರಿಗೆ ಕ್ರೀಡಾಭಿಮಾನ ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಯುವಕರಿಗೆ ಕ್ರೀಡಾಭಿಮಾನ ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ನಗರದ ಹರಿಶ್ಚಂದ್ರ ಘಾಟ್ ನ ಬಳಿಯಿರುವ ತಾಲೂಕು ಕ್ರೀಡಾoಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಮಾಂಟೆಸ್ಸರಿ ಮೆಮೋರಿಯಲ್ ಸೆಂಟ್ರಲ್ ಸ್ಕೂಲ್ ನ ವತಿಯಿಂದ ಆಯೋಜಿಸಿದ್ದ 2024-25 ನೇ ಸಾಲಿನ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೈಹಿಕ, ಮಾನಸಿಕ ನೆಮ್ಮದಿಗೆ ಕ್ರೀಡೆಗಳು ಅತ್ಯಂತ ಅವಶ್ಯಕವಾಗಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೂ ಕ್ರೀಡೆಗಳು ಸಹಕಾರಿಯಾಗಿವೆ. ಆಟಗಳ ಫಲಿತಾಂಶಕ್ಕಿಂತ ಕ್ರೀಡಾ ಮನೋಭಾವ ಮತ್ತು ಪಾಲ್ಗೊಳ್ಳುವಿಕೆ ಮುಖ್ಯವಾದುದು. ಬಹುಮಾನ ಗೆಲ್ಲುವ ಗುರಿಗಿಂತ ಮನಸ್ಸಿನ ಶಾಂತತೆ, ದೈಹಿಕ ಸದೃಢತೆಗೆ ಕ್ರೀಡೆಗಳು ಅನಿವಾರ್ಯವಾಗಿವೆ ಎಂದರು.

ಇಂದಿನ ಯುವಜನತೆಗೆ ಆರೋಗ್ಯದ ಮೇಲಿನ ಕಾಳಜಿ ಕಡಿಮೆಯಾದಂತಿದ್ದು, ಆರೋಗ್ಯದ ಬಗ್ಗೆ ಯಾರೂ ನಿರ್ಲಕ್ಷ್ಯ ತೋರಬಾರದು. ಪುಸ್ತಕ ಜ್ಞಾನದ ಜತೆಗೆ ಕ್ರೀಡಾ ಪ್ರೌಢಿಮೆಯೂ ಇರಬೇಕು. ಎಲ್ಲದಕ್ಕೂ ಸಮಯ ನೀಡಿದಂತೆ ಕ್ರೀಡಾ ಚಟುವಟಿಕೆಗಳಿಗೂ ಇಂತಿಷ್ಟು ಸಮಯ ಎಂದು ನಿಗದಿಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳ ಕೌಶಲ್ಯ ಪ್ರದರ್ಶನಕ್ಕೆ ತುಂಬಾ ಉಪಯುಕ್ತವಾಗಿವೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಆರ್. ಶಿವಕುಮಾರ್, ಮಹೇಶಣ್ಣ, ಅಶೋಕ್, ನಾಗನಾಯ್ಕ, ವಿ. ಭಾಗ್ಯ, ವಕೀಲ ಶಿವಕುಮಾರ್, ಟಿ. ವೀರಕರಿಯಪ್ಪ, ಕಲ್ಲಟ್ಟಿ ಹರೀಶ್, ಶಿವಾನಂದ್ ಹಾಗೂ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.