ದೈಹಿಕ ಆರೋಗ್ಯ ಸದೃಢತೆಗೆ ಕ್ರೀಡೆ ಸಹಕಾರಿ

| Published : Feb 02 2025, 01:00 AM IST

ಸಾರಾಂಶ

ನಾಯಕತ್ವ ಗುಣ ಸಹಯೋಗದ ಕೌಶಲ್ಯದ ಜತೆಗೆ ಜೀವನದಲ್ಲಿ ಸೋಲು-ಗೆಲುವನ್ನು ಏಕಮುಖವಾಗಿ ತಗೆದುಕೊಳ್ಳಬೇಕು ಎಂಬುದನ್ನು ಕ್ರೀಡೆಗಳು ತಿಳಿಸುತ್ತವೆ

ಗದಗ: ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಬದ್ಧತೆ ಜತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತವೆ. ದೈಹಿಕ ಆರೋಗ್ಯ ಸದೃಢತೆಗೆ ಕ್ರೀಡೆಗಳು ಸಹಕಾರಿ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.

ಇಲ್ಲಿಯ ರಾಜೀವಗಾಂಧಿ ನಗರದ ಉರ್ದು ಸರ್ಕಾರಿ ಶಾಲೆಯ ಮಕ್ಕಳ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ನಾಯಕತ್ವ ಗುಣ ಸಹಯೋಗದ ಕೌಶಲ್ಯದ ಜತೆಗೆ ಜೀವನದಲ್ಲಿ ಸೋಲು-ಗೆಲುವನ್ನು ಏಕಮುಖವಾಗಿ ತಗೆದುಕೊಳ್ಳಬೇಕು ಎಂಬುದನ್ನು ಕ್ರೀಡೆಗಳು ತಿಳಿಸುತ್ತವೆ. ವಿಶೇಷಚೇತನ ಮಕ್ಕಳನ್ನು ಸಮನ್ವಯಗೊಳಿಸಿ ಅವರನ್ನೊಳಗೊಂಡು ಶಾಲಾ ಕ್ರೀಡೆಗಳು ನಡೆಯಲಿ ಎಂದರು. ಉರ್ದು ಸಿ.ಆರ್.ಪಿ ಕಲಿದ್ ಅಹಮದ್ ಜಲಗೇರಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಿಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಉತ್ತಮ ಕೌಶಲ್ಯ, ಆತ್ಮವಿಶ್ವಾಸ ಮೂಢಿಸುತ್ತವೆ ಎಂದರು.

ಶಿಕ್ಷಕ ಐ.ಬಿ. ಗಾಡಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಟ-ಪಾಠಗಳು ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುತ್ತವೆ. ಅಭಿರುಚಿಗೆ ಅನುಗುಣವಾಗಿ ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಕಲಿಕೆಯಲ್ಲಿ ಪ್ರಗತಿ ಕಂಡುಬರುತ್ತದೆ ಎಂದರು.

ಶಾಲಾ ಮುಖ್ಯೋಪಾಧ್ಯಾಯಿನಿ ಖೈರುನ್ನಿಸಾ ದಾವಲಖಾನ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಪಿಳ್ಳೆ, ಸಹಾಯಕಿ ಶಕೀಲಾ ನದಾಫ, ಬಸವಣ್ಣೆವ್ವ ಮುಳ್ಳಾಳ, ನೀಲವ್ವ ರೊಟ್ಟಿ, ಗೀತಾ ಸಾಲಿಮಠ, ರಾಹೀಲಾ ಹೊಸಳ್ಳಿ ಮುಂತಾದವರು ಉಪಸ್ಥಿತರಿದ್ದರು. ಎನ್.ಎಚ್.ಜಕ್ಕಲಿ ಸ್ವಾಗತಿಸಿದರು. ಎಚ್.ಬಿ.ಮಕಾನದಾರ ನಿರೂಪಿಸಿದರು. ಎಸ್.ಎಸ್. ಬಳ್ಳಾರಿ ವಂದಿಸಿದರು.