ಸಾರಾಂಶ
ಪ್ರೌಢಶಾಲೆಗಳ ಚಿಕ್ಕಮಗಳೂರು ತಾಲೂಕು ಮಟ್ಟದ ಕ್ರೀಡಾಕೂಟ ।
- ನಿರಂತರ ಭಾಗವಹಿಸುವಿಕೆಯಿಂದ ಕ್ರೀಡಾಸಕ್ತಿ ವೃದ್ಧಿ- ಗೆಲುವಿಗೆ ಸೀಮಿತರಾಗದೇ ಸ್ಪರ್ಧಿಸುವ ಗುಣ ಬೆಳೆಸಿಕೊಳ್ಳಿ
- ದಸರಾ ಕ್ರೀಡಾಕೂಟಕ್ಕೆ ಪುರಾತನ ಇತಿಹಾಸ- ಕ್ರೀಡಾಕೂಟ ಆಯೋಜನೆ ಮೂಲಕ ಮರುಕಳಿಸಲಿದೆ ದಸರಾ ವೈಭವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕ್ರೀಡಾಕೂಟ ವಿದ್ಯಾರ್ಥಿಗಳಿಗೆ ಶಾರೀರಿಕ ಹಾಗೂ ಮಾನಸಿಕವಾಗಿ ಸಮತೋಲನ ಕಾಪಾಡಲು ಸಹಕಾರಿ. ಹೀಗಾಗಿ ಪಠ್ಯದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ನಗರದ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಇಲಾಖೆ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಯೋಗದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ನಿರಂತರವಾಗಿ ಭಾಗವಹಿಸುವುದರಿಂದ ಕ್ರೀಡಾಸಕ್ತಿ ಮೂಡಲಿದೆ. ಜೊತೆಗೆ ಆರೋಗ್ಯಯುತ ಶರೀರ ಪಡೆದು ಕೊಳ್ಳಬಹುದು ಎಂದ ಅವರು, ಕ್ರೀಡಾಕೂಟದಲ್ಲಿ ಹಲವಾರು ರೀತಿಯ ಕ್ರೀಡೆಗಳಿವೆ. ಆಸಕ್ತಿ ಹೊಂದಿರುವ ಕ್ರೀಡೆಯಲ್ಲಿ ಸ್ಪರ್ಧಿಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದು ಕಿವಿಮಾತು ಹೇಳಿದರು.ಮಕ್ಕಳು ವಿದ್ಯಾರ್ಥಿ ದೆಸೆಯಿಂದಲೇ ಕ್ರೀಡೆಯಲ್ಲಿ ಭಾಗವಹಿಸುವ ಜೊತೆಗೆ ಕ್ರೀಡಾ ಮನೋಭಾವ ರೂಢಿಸಿಕೊಳ್ಳಬೇಕು. ಗೆಲುವಿಗೆ ಮಾತ್ರ ಸೀಮಿತರಾಗದೇ ಸ್ಪರ್ಧಿಸುವ ಗುಣ ಬೆಳೆಸಿಕೊಳ್ಳಬೇಕು. ಇಂದು ಸೋತವರು ಮುಂದೊಂದು ದಿನ ಗೆಲುವಿನ ನಗೆ ಬೀರುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ದಸರಾ ಕ್ರೀಡಾಕೂಟಕ್ಕೆ ಪುರಾತನ ಇತಿಹಾಸವಿದೆ. ನಾಡಹಬ್ಬದ ದಸರಾದಲ್ಲಿ ವೇಳೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೂ ಕ್ರೀಡಾಕೂಟ ಆಯೋಜಿಸಿತ್ತು. ಹಿಂದಿನ ಕಾಲದಲ್ಲಿ ನಾಡಹಬ್ಬದಂದು ಕುಸ್ತಿ ನಡೆಯುತ್ತಿವು. ಇದೀಗ ಕ್ರೀಡಾಕೂಟ ಆಯೋಜಿಸಿ ದಸರಾ ವೈಭವವನ್ನು ಉಳಿಸುತ್ತಿದೆ ಎಂದರು.ವಲಯ ಮಟ್ಟದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಶ್ರಮಿವಿಟ್ಟು ಕ್ರೀಡೆಯಲ್ಲಿ ಆಟವಾಡಿದರೆ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಬಹುದು. ಇದಕ್ಕೆ ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಅಗತ್ಯ. ಇದರಿಂದ ಜಿಲ್ಲೆಯ ಹೆಸರಿನ ಕೀರ್ತಿ ಪತಾಕೆ ಎಲ್ಲೆಡೆ ರಾರಾಜಿಸು ವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್, ಶಿಕ್ಷಣ ಸಂಯೋಜಕ ಕೃಷ್ಣಮೂರ್ತಿ ರಾಜ್ ಅರಸ್, ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಗಂಗಾಧರ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್, ದೈಹಿಕ ಶಿಕ್ಷಣ ಶಿಕ್ಷಕರ (ಗ್ರೇಡ್-1) ಸಂಘದ ಅಧ್ಯಕ್ಷ ಶಂಕರೇಗೌಡ, ತಾಲೂಕು ಅಧ್ಯಕ್ಷ ಪ್ರವೀಣ್ ಉಪಸ್ಥಿತರಿದ್ದರು.
21 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಕ್ರೀಡಾಜ್ಯೋತಿ ಸ್ವೀಕರಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಎಂಎಲ್‌ಸಿ ಭೋಜೇಗೌಡ ಇದ್ದರು.