ಸಾರಾಂಶ
ವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡು ಜಿಪಂ ಸಿಇಒ ಹೇಮಂತ್ ಅಭಿಮತಕನ್ನಡಪ್ರಭ ವಾರ್ತೆ ಶಿವಮೊಗ್ಗ
ದಿನನಿತ್ಯದ ಚಟುವಟಿಕೆಯ ಒತ್ತಡದಿಂದ ಹೊರ ಬರಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ತಿಳಿಸಿದರು.ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತ್ ಮೈದಾನದಲ್ಲಿ ನಡೆದ ವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಒಂದು ಶಿಸ್ತಿನ ಇಲಾಖೆಯಾಗಿದ್ದು, ವಿರಾಮವಿಲ್ಲದೆ ಸದಾಕಾಲವೂ ಒತ್ತಡದ ನಡುವೆ ಕರ್ತವ್ಯವನ್ನು ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ಈ ರೀತಿಯ ಕ್ರೀಡಾಕೂಟ ಒತ್ತಡದಿಂದ ಹೊರಬರಲು ಸಹಕಾರಿಯಾಗಿದೆ ಎಂದರು.
ವಾರ್ಷಿಕ ಕ್ರೀಡಾಕೂಟ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಕಾರಣವಾಗುತ್ತದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಸ್ಪರ ಹೊಂದಾಣಿಕೆಯಿಂದ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮುಂದಿನ ದಿನಗಳಲ್ಲಿ ತಮ್ಮ ಕರ್ತವ್ಯದಲ್ಲಿ ಸಮನ್ವಯತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಕ್ರೀಡಾಕೂಟ ಸ್ಪರ್ಧೆಯಲ್ಲ, ಮನೋರಂಜನೆ. ಇದರಲ್ಲಿ ಪ್ರತಿಯೊಬ್ಬರು ಸಂಭ್ರಮ ಮತ್ತು ಉತ್ಸಾಹದಿಂದ ಭಾಗವಹಿಸಿ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಒಂದು ವೇದಿಕೆಯಾಗಿದೆ. ಎಲ್ಲರೂ ಒತ್ತಡ ರಹಿತವಾಗಿ ಕ್ರೀಡೆಯಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕ್ರೀಡಾ ಜ್ಯೋತಿಯನ್ನು ನೀಡಿ ಪುರುಷರ 800 ಮೀಟರ್ ಓಟಕ್ಕೆ ಚಾಲನೆ ನೀಡುವ ಮೂಲಕ ಕ್ರೀಡಾಕೂಟವನ್ನು ಆರಂಭಿಸಲಾಯಿತು.ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಕಾರ್ಯಾಪ್ಪ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿ, ಮಹಿಳಾ ಪೋಲಿಸರು ಉಪಸ್ಥಿತರಿದ್ದರು.