ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಕ್ರೀಡೆಯಿಂದ ದೈಹಿಕ ದೃಡತೆಗೆ ಅವಕಾಶವಿದ್ದು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದೈಹಿಕ ಸದೃಢತೆಗೆ ಪ್ರಾಮುಖ್ಯತೆಯನ್ನು ನೀಡಬೇಕು. ಕ್ರೀಡಾ ಸಾಧನೆಯು ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ಗಟ್ಟಿಗೊಳಿಸಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಎಳವೆಯಿಂದಲೇ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಬೇಕು ಎಂದು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಅವರು ಮಾಯ್‌ದೆ ದೇವುಸ್ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನ. ೫ ಮತ್ತು ೬ ರಂದು ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ ಸುಭದ್ರವಾದ ರಾಷ್ಟ್ರವನ್ನು ಕಟ್ಟುವಲ್ಲಿ ಸದೃಢವಾದ ಯುವಕರ ಅವಶ್ಯಕತೆ ಇದ್ದು, ಗುಣಮಟ್ಟದ ಶಿಕ್ಷಣದ ಜೊತೆಗೆ ಗುಣಮಟ್ಟದ ಆರೋಗ್ಯ ತುಂಬಾ ಮುಖ್ಯವಾಗಿದೆ. ಈ ದೇಶದ ಭವಿಷ್ಯ ಯುವ ಸಮೂಹ ಮತ್ತು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಂತಿದೆ. ಈ ಕ್ರೀಡಾಕೂಟದ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಯ್‌ದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ. ಫಾ. ಲಾರೆನ್ಸ್ ಮಸ್ಕರೇನ್ಹಸ್ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂತ ಫಿಲೋಮಿನಾ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಮಂಗಳೂರಿನ ಎ.ಜೆ. ಆಸ್ಪತ್ರೆಯ ವೈದ್ಯ ಶರಣ್ ಜೆ. ಶೆಟ್ಟಿ ಹಾಗೂ ಪುತ್ತೂರಿನ ನಗರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಜಾನ್ಸನ್ ಡಿಸೋಜ ಶುಭ ಹಾರೈಸಿದರು. ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪುತ್ತೂರಿನ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳಾದ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಸೈಂಟ್ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆ, ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆ, ಸೈಂಟ್ ವಿಕ್ಟರ್ ಬಾಲಕಿಯರ ಪ್ರೌಢಶಾಲೆ, ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಹಾಗೂ ಸಂತ ಫಿಲೋಮಿನಾ ಪದವಿ ಕಾಲೇಜು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.
ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯಗುರು ರೆ. ಫಾ. ಮ್ಯಾಕ್ಸಿನ್ ಡಿ ಸೋಜಾ ಸ್ವಾಗತಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟಾ ವಂದಿಸಿದರು. ಶಿಕ್ಷಕಿ ಸವಿತಾ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.