ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ 2025-26ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಸಂಸದ ರಾಜಶೇಖರ ಹಿಟ್ನಾಳ ಉದ್ಘಾಟಿಸಿದರು.

ಕೊಪ್ಪಳ: ಕ್ರೀಡೆಗಳಿಂದ ನಮ್ಮಲ್ಲಿ ಉತ್ಸಾಹ ಹಾಗೂ ಚೈತನ್ಯ ಹೆಚ್ಚಾಗುವ ಜತೆಗೆ, ಎಲ್ಲರೂ ಒಂದು ಕಡೆ ಸೇರಲು ಅವಕಾಶ ಮಾಡಿಕೊಡುತ್ತದೆ ಎಂದು ಕೊಪ್ಪಳ ಸಂಸದ ಕೆ. ರಾಜಶೇಖರ ಹಿಟ್ನಾಳ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಕೊಪ್ಪಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ನೌಕರರು ದಿನವೂ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. 50 ಪ್ರತಿಶತ ಸಿಬ್ಬಂದಿಯಿದ್ದರೂ ಕಚೇರಿಯ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸುವ ನೌಕರರು, ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವ ಜತೆಗೆ ಎಲ್ಲರೂ ಒಂದು ತಂಡವಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ಸ್ನೇಹ, ಪ್ರೀತಿ, ಆತ್ಮೀಯತೆ ಬೆಳೆಯುತ್ತದೆ ಎಂದರು.

ಕ್ರೀಡಾ ಧ್ವಜಾರೋಹಣ ನೆರವೇರಿಸಿದ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಕ್ರೀಡೆಯಲ್ಲಿ ಸ್ಥಾನ ಪಡೆಯುವುದಕ್ಕಿಂತ ಭಾಗವಹಿಸುವುದು ಬಹಳ ಮುಖ್ಯ. ಸರ್ಕಾರಿ ನೌಕರರು ಇತ್ತೀಚೆಗೆ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಫುಟ್‌ಬಾಲ್‌, ಹಾಕಿ, ವಾಲಿಬಾಲ್‌ನಂತಹ ಕ್ರೀಡೆಗಳಿಗೆ ನಮ್ಮಲ್ಲಿ ಇನ್ನೂ ಸುಸಜ್ಜಿತ ಟ್ರ‍್ಯಾಕ್‌ಗಳು ಆಗಬೇಕಿದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಆರ್. ಜುಮ್ಮನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಮ್ಮ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಸಲು ಮೂಲಭೂತ ಸೌಲಭ್ಯ ಕೊರತೆ ಇದೆ. ಆದರೂ 2029ರಲ್ಲಿ ರಾಜ್ಯಮಟ್ಟದ ನೌಕರರ ಕ್ರೀಡಾಕೂಟದ ಆಯೋಜನೆಗೆ ನಾವೆಲ್ಲರೂ ಸಂಕಲ್ಪ ಮಾಡಿದ್ದೇವೆ ಎಂದರು.

ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಎರಡು ದಿನಗಳ ಈ ಕ್ರೀಡಾಕೂಟದಲ್ಲಿ ಕಬಡ್ಡಿ, ವಾಲಿಬಾಲ, ಟೇಬಲ್ ಟೆನ್ನಿಸ್, ಕೇರಂ, ಚೆಸ್, ಕ್ರಿಕೆಟ್, ಬಾಲ್ ಬ್ಯಾಡ್ಮಿಂಟನ್ ಇತರ ಹಲವಾರು ಕ್ರೀಡೆಗಳ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಜೋಗಿ, ಖಜಾಂಚಿ ಜಯತೀರ್ಥ ದೇಸಾಯಿ, ರಾಜ್ಯ ಪರಿಷತ್ ಸದಸ್ಯ ಮಹ್ಮದ್ ಆಸೀಫ್ ಅಲಿ, ಗೌರವಾಧ್ಯಕ್ಷ ಸಿದ್ದಪ್ಪ ಮೇಳಿ, ಕಾರ್ಯಾಧ್ಯಕ್ಷ ಬೀರಪ್ಪ ಅಂಡಗಿ, ರಾಜ್ಯ ಸಂಘಟನಾ ಪದಾಧಿಕಾರಿಗಳಾದ ಮಹೇಶ ಸಬರದ, ಮಂಜುನಾಥ ಆರೆಂಟನೂರ, ಶ್ರೀನಿವಾಸ ನಾಯಕ ಉಪಸ್ಥಿತರಿದ್ದರು.