ಕ್ರೀಡೆಯಿಂದ ಆರೋಗ್ಯ ಮತ್ತು ಚಾರಿತ್ರ್ಯe ಚೆನ್ನಾಗಿ ಇರುತ್ತದೆ ಹಾಗೂ ಅದು ಸಮಚಿತ್ತ ಭಾವನೆ ಮೂಡಿಸುತ್ತದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಣಿಬೆನ್ನೂರು: ಕ್ರೀಡೆಯಿಂದ ಆರೋಗ್ಯ ಮತ್ತು ಚಾರಿತ್ರ‍್ಯ ಚೆನ್ನಾಗಿ ಇರುತ್ತದೆ ಹಾಗೂ ಅದು ಸಮಚಿತ್ತ ಭಾವನೆ ಮೂಡಿಸುತ್ತದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸ್ಥಳೀಯ ನಗರಸಭಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಸದರ ಕ್ರೀಡಾಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ಯಾವತ್ತು ಕಳೆದುಕೊಳ್ಳಬಾರದು. ಇಲ್ಲಿ ಚಿಕ್ಕಮಕ್ಕಳು ಆಟವಾಡುವಾಗ ಸಿಂಹದ ಮರಿಯಂತೆ ಆಡಿದರು. ತಾಲೂಕಿನ ಗ್ರಾಮೀಣ ಭಾಗದ ಮಕ್ಕಳಲ್ಲಿ ಪ್ರತಿಭೆ ಇದೆ. ಅವರಿಗೆ ಅವಕಾಶ ಮಾಡಿಕೊಟ್ಟರೆ ದೇಶಕ್ಕೆ ಪದಕ ತಂದು ಕೊಡುತ್ತಾರೆ. ಸೋಲು-ಗೆಲುವು ಸಮನವಾಗಿ ತೆಗೆದುಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ತೆರಳಲು ಅಗತ್ಯವಿರುವ ಎಲ್ಲ ರೀತಿಯ ವ್ಯವಸ್ಥೆಯನ್ನು ನಾನು ಮಾಡಿಕೊಡುತ್ತೇನೆ ಎಂದರು. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಈ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕೋವಿಡ್ ನಂತರ ಅನೇಕ ದೇಶಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಆದರೆ ನಮ್ಮ ದೇಶ ಕೋವಿಡ್ ನಂತರವೂ ಆರ್ಥಿಕವಾಗಿ ಶೇ.7.5ರಷ್ಟು ವೇಗವಾಗಿ ಬೆಳೆಯುತ್ತಿದೆ. ಅಮೆರಿಕಾ ಬೆಳವಣಿಗೆ ಶೇ.4 ದಾಟಿಲ್ಲ. ಚೀನಾ ಶೇ.3 ದಾಟಿಲ್ಲ. ಮೋದಿಯವರು 25 ಕೋಟಿ ಜನರನ್ನು ಬಡತನದಿಂದ ಮುಕ್ತ ಮಾಡಿದ್ದಾರೆ. ಅದು ಮೋದಿಯವರ ನಾಯಕತ್ವದಿಂದ ಸಾಧ್ಯವಾಗಿದೆ. ಇಂದು ಮಕ್ಕಳಿಗೆ ಪರೀಕ್ಷೆ ಎದುರಿಸುವುದನ್ನು ಹೇಳಿಕೊಟ್ಟಿದ್ದಾರೆ. ಮೋದಿಯವರು ಕ್ರೀಡೆಯ ಬಗ್ಗೆ ಮೊದಲು ಫಿಟ್ ಇಂಡಿಯಾ ಅಂದರು, ನಂತರ ಖೇಲೋ ಇಂಡಿಯಾ ಅಂದರು ನಂತರ ಜೀತೋ ಇಂಡಿಯಾ ಅಂದರು. ಅದರ ಪರಿಣಾಮ ಟೊಕಿಯೋ ಒಲಿಂಪಿಕ್ಸನಲ್ಲಿ ಹೆಚ್ಚು ಪದಕ ಪಡೆಯಲು ಸಾಧ್ಯವಾಯಿತು. ನಾನು ಸಿಎಂ ಆಗಿದ್ದಾಗ 75 ಕ್ರೀಡಾಪಟುಗಳಿಗೆ ಪ್ರತಿ ವರ್ಷ ₹ 8 ಲಕ್ಷ ಕೊಟ್ಟು ತರಬೇತಿ ಕೊಡಿಸಿದ್ದೆ. ಕರ್ನಾಟಕದಲ್ಲಿ ಪ್ರತಿಭೆ ಇದೆ, ಅದಕ್ಕೆ ಪೋತ್ಸಾಹ ನೀಡುವ ಅಗತ್ಯವಿದೆ. ಕ್ರೀಡೆಯಲ್ಲಿ ಮುಂದೆ ಬರಲು ನಮ್ಮ ಮನೋಭಾವನೆ ಬದಲಾಗಬೇಕು. ನಾವು ಸೋಲಬಾರದು ಎಂದು ಆಡುವುದು ರಕ್ಷಣಾತ್ಮಕ ಆಟವಾದರೆ. ಗೆಲ್ಲಬೇಕು ಎನ್ನುವುದು ಅಕ್ರಮಣಕಾರಿ ಆಟ. ನಮ್ಮ ಬದುಕಿನಲ್ಲಿ ಮುಂದೆ ಬರಬೇಕಾದರೆ ಕಠಿಣ ಪರಿಶ್ರಮದಿಂದ ಮುಂದೆ ಬರಬೇಕು ಎಂದರು.ರಾಣಿಬೆನ್ನೂರು ಇತಿಹಾಸದಲ್ಲಿಯೇ ಈ ರೀತಿಯ ಕ್ರೀಡಾ ಮಹೋತ್ಸವ ನೋಡಿರಲಿಲ್ಲ. ಅತ್ಯಂತ ಅಭೂತಫೂರ್ವವಾಗಿ ಆಯೋಜನೆ ಮಾಡಿದ್ದಾರೆ. ಅರುಣಕುಮಾರ ಪೂಜಾರ ತಮ್ಮ ಸಂಘಟನೆ ಶಕ್ತಿ ತೋರಿಸಿಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಹೆಬ್ಬಾಗಿಲಿನಲ್ಲಿ ಏನಾಗುತ್ತದೆಯೋ ಅದು ಸಂಪೂರ್ಣ ಉತ್ತರ ಕರ್ನಾಟಕದಲ್ಲಿ ಪರಿಣಾಮ ಬೀರುತ್ತದೆ. ಇದೀಗ ಉತ್ತರ ಕರ್ನಾಟಕ ಭಾಗದ ಹೆಬ್ಬಾಗಿಲಿನಲ್ಲಿ ಬದಲಾವಣೆ ಗಾಳಿ ಬೀಸಿದ್ದು ಅದು ಉತ್ತರ ಕರ್ನಾಟಕದಾದ್ಯಂತ ಪರಿವರ್ತನೆಗೆ ಕಾರಣವಾಗಲಿದೆ. ಮುಂಬರುವ ದಿನಗಳಲ್ಲಿ ಇಂಡಿಯನ್ ಸ್ಟಾರ್, ಕರ್ನಾಟಕ ಸ್ಟಾರ್, ಇಂಟರ್ ನ್ಯಾಷನಲ್ ಎಲ್ಲವೂ ಇಲ್ಲಿಯೇ ಆಗಬೇಕು. ಮೇ ಅಂತ್ಯದಲ್ಲಿ ದೊಡ್ಡಪ್ರಮಾಣದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಕರೆಯಿಸಿ ಕುಸ್ತಿ ಆಯೋಜನೆ ಮಾಡಲು ತೀರ್ಮಾನಿಸಿದ್ದೇವೆ ಎಂದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ ನ್ಯಾಯ ನೀಡಿದ್ದು ಅದು ಈಗ ಗೊತ್ತಾಗುವುದಿಲ್ಲ. ಮುಂದಿನ ಹತ್ತು ವರ್ಷದ ನಂತರ ಅವರ ಕೆಲಸ ಬಗ್ಗೆ ಅರಿವು ಮೂಡುತ್ತದೆ. ಇಂತಹ ನಾಯಕರ ಬೆಂಬಲಕ್ಕೆ ನಮ್ಮ ಜನರು ನಿಲ್ಲಬೇಕು. ಸಾಮಾನ್ಯ ಇಟ್ಟಿಗೆ ವ್ಯಾಪಾರಿಯಾದ ನನ್ನನ್ನು ವಿಧಾನಸಭೆಗೆ ಕಳುಹಿಸಿದ್ದಾರೆ. ಅವರು ನೀಡಿದ ಯೋಜನೆಗಳು ಇಂದಿಗೂ ಮನೆ ಮಾತಾಗಿದೆ. ದೇವರಾಜು ಅರಸು ನಂತರ ನಿಜವಾದ ಸಾಮಾಜಿಕ ಹರಿಕಾರ ಬೊಮ್ಮಾಯಿಯವರು. ಈ ಹಿಂದೆ ಇದೇ ವೇದಿಕೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜಾಹುಲಿ ಅಂತಹ ಹೇಳಿದ್ದರು. ನಾನು ಈಗ ಇದೇ ವೇದಿಕೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಉತ್ತರ ಕರ್ನಾಟಕದ ಹೆಬ್ಬುಲಿ ಎನ್ನುತ್ತೇನೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ನಗರ ಮಂಡಳದ ಅಧ್ಯಕ್ಷ ಮಂಜುನಾಥ ಕಾಟಿ, ಗ್ರಾಮೀಣ ಮಂಡಳದ ಅಧ್ಯಕ್ಷ ಸುಭಾಸ ಸಿರಿಗೇರಿ, ಭರತ ಬೊಮ್ಮಾಯಿ, ಶಿವಣ್ಣ ನಂದಿಹಳ್ಳಿ, ಮಂಜುನಾಥ ಓಲೇಕಾರ, ಪ್ರಕಾಶ ಜೈನ್, ಭಾರತಿ ಜಂಬಗಿ, ಕೆ.ಶಿವಲಿಂಗಪ್ಪ, ಎಸ್.ಎಸ್.ರಾಮಲಿಂಗಣ್ಣನವರ, ಚೋಳಪ್ಪ ಕಸವಾಳ, ಶಿವಕುಮಾರ ನರಸಗೊಂಡರ, ನಾಗರಾಜ ಪವಾರ, ಮಲ್ಲಿಕಾರ್ಜುನ ಅಂಗಡಿ, ಮಾಳಪ್ಪ ಪೂಜಾರ, ಪ್ರಕಾಶ ಪೂಜಾರ, ಕುಬೇರ ಕೊಂಡಜ್ಜಿ, ಪರಮೇಶ ಗೂಳಣ್ಣನವರ, ನಿಂಗಪ್ಪ ಕೋಡಿಹಳ್ಳಿ, ಪವನಕುಮಾರ ಮಲ್ಲಾಡದ, ಬಸವರಾಜ ಚಳಗೇರಿ, ಶಿವಪುತ್ರಪ್ಪ ದೇಸಾಯಿ, ಹುಚ್ಚಪ್ಪ ಮೆಡ್ಲೇರಿ, ಚೆನ್ನಮ್ಮ ಗುರುಪಾದೇವರಮಠ, ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.