ಸಾರಾಂಶ
-ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಭಿಮತ । ಆಫಿಷಿಯಲ್ಸ್ ಪೊಲೀಸ್ ಕ್ರಿಕೆಟ್ ಕಪ್‍ಗೆ ಚಾಲನೆ
-----ಕನ್ನಡಪ್ರಭವಾರ್ತೆ ಚಿತ್ರದುರ್ಗ
ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ಉಲ್ಲಾಸ ದೊರೆಯವುದು ಜತೆಗೆ ಕೆಲಸ ಮಾಡಲು ಚೈತನ್ಯ ಬರಲಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಆಫಿಷಿಯಲ್ಸ್ ಪೊಲೀಸ್ ಕ್ರಿಕೆಟ್ ಕಪ್ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ವಿವಿಧ ಇಲಾಖೆಯ ಸರ್ಕಾರಿ ನೌಕರರು ಸೇರಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಕ್ರೀಡೆ ಮನಸ್ಸನ್ನು ಮುದಗೊಳಿಸುವ ಜತೆಗೆ ಕೆಲಸಗಳ ಕಡೆ ಹೆಚ್ಚು ಮಗ್ನರಾಗಲು, ಆಸಕ್ತಿವಹಿಸಲು ಸಾಧ್ಯವಾಗಲಿದೆ. ಕ್ರೀಡೆ ಇರುವ ಕಡೆ ಯಶಸ್ಸು ಇರಲಿದೆ ಎಂದರು.
ಕ್ರೀಡೆಯಲ್ಲಿ ಸೋಲು-ಗೆಲವು ಸಹಜ. ಮುಖ್ಯವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ. ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತಮ ವಾತಾವರಣವಿದೆ. ಪೊಲೀಸರು ಕ್ರೀಡೆಯಲ್ಲಿ ಪಾಲ್ಗೊಂಡಲ್ಲಿ ಅವರ ದೇಹ ಚುರುಕಿನಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಯಾವುದೇ ಇಲಾಖೆ ಇರಲಿ ಪ್ರತಿಯೊಬ್ಬರಿಗೂ ದೈಹಿಕ ಸಾಮರ್ಥ್ಯ ಬಹಳ ಮುಖ್ಯ. ಎಲ್ಲರಿಗೂ ದೈಹಿಕ ಸಾಮರ್ಥ್ಯದ ಬಗ್ಗೆ ಅರಿವು ಹಾಗೂ ವೇದಿಕೆ ಕಲ್ಪಿಸುವಲ್ಲಿ ಕ್ರೀಡಾಕೂಟ ಆಯೋಜಿಲಾಗಿದೆ. ಕ್ರೀಡಾಕೂಟಗಳಿಂದ ಉತ್ತಮ ಗೆಳೆತನ, ಬಾಂಧವ್ಯ ವೃದ್ಧಿಯಾಗಲಿದೆ ಎಂದು ತಿಳಿಸಿದರು.
ಆಫಿಷಿಯಲ್ಸ್ ಪೊಲೀಸ್ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ಪೊಲೀಸ್ ಇಲಾಖೆ, ನ್ಯಾಯಾಂಗ ಇಲಾಖೆ, ಬೆಸ್ಕಾಂ, ಜಿ.ಪಂ., ಆರೋಗ್ಯ ಇಲಾಖೆ, ಭದ್ರಾ ಮೇಲ್ದಂಡೆ ಯೋಜನೆ, ನಗರಸಭೆ, ಅಂಚೆ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪತ್ರಕರ್ತರ ತಂಡ ಸೇರಿದಂತೆ 16 ವಿವಿಧ ಇಲಾಖೆಯ ತಂಡಗಳು ಭಾಗವಹಿಸಿದ್ದವು.ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ 4 ಬೊಲೆರೋ ನಿಯೋ ಹೊಸ ಮಾದರಿಯ ವಾಹನಗಳನ್ನು ಪೊಲೀಸ್ ಇಲಾಖೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹಸ್ತಾಂತರಿಸಿದರು.
ಮೊದಲ ಹಂತದಲ್ಲಿ 4 ಬೊಲೆರೋ ವಾಹನಗಳು ಹಾಗೂ ಎರಡನೇ ಹಂತದಲ್ಲಿ 4 ಬೊಲೆರೋ ನಿಯೋ ವಾಹನಗಳು ಸೇರಿದಂತೆ ಒಟ್ಟು 8 ಬೊಲೆರೋ ವಾಹನಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಶಾಸಕರ ಅನುದಾನದಲ್ಲಿ ಪೊಲೀಸ್ ಇಲಾಖೆಗೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ಉಪಾಧೀಕ್ಷಕ ಗಣೇಶ್, ಅಪರಾಥ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕ ಉಮೇಶ್ ನಾಯ್ಕ್, ಚಿತ್ರದುರ್ಗ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ದಿನಕರ್ ಇದ್ದರು.
------------------ಪೋಟೋ: ಚಿತ್ರದುರ್ಗದ ಪೊಲೀಸ್ ಪರೇಡ್ ಮೈದಾನದಲ್ಲಿ ಆರಂಭಗೊಂಡ ಆಫಿಷಿಯಲ್ಸ್ ಪೊಲೀಸ್ ಕ್ರಿಕೆಟ್ ಕಪ್ ಪಂದ್ಯಾವಳಿ ಉದ್ಘಾಟನಾ ಪಂದ್ಯದಲ್ಲಿ ಸಚಿವ ಡಿ.ಸುಧಾಕರ್ ಆಟಗಾರರ ಪರಿಚಯ ಮಾಡಿಕೊಂಡರು. ಎಸ್ಪಿ ರಂಜಿತ್ ಕುಮಾರ್ ಬಂಡಾರು ಇದ್ದಾರೆ.
---------ಫೋಟೋ:11 ಸಿಟಿಡಿ5