ಸೊರಬ: ಗ್ರಾಮೀಣ ಮಟ್ಟದಲ್ಲಿ ಯುವಕರು ಕೇವಲ ಕ್ರೀಡಾಪಟುಗಳಾಗಿ ಅಷ್ಟೇ ಉಳಿಯದೇ ಉತ್ತಮ ಸಂಘಟಕರಾಗಿ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಮುಂದಾಗುತ್ತಿರುವುದು ಸಮಾಜದ ಆರೋಗ್ಯಕರ ಬೆಳವಣಿಗೆಯ ಸಂಕೇತವಾಗಿದೆ ಎಂದು ತಾಲೂಕು ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಪ್ರದೀಪ್‌ಗೌಡ ಬಾಡದಬೈಲು ಅಭಿಪ್ರಾಯಪಟ್ಟರು.
ತಾಲೂಕಿನ ಶಿವಪುರ-ಕತವಾಯಿ ಗ್ರಾಮಗಳ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿದ ಎಸ್‌ಕೆಪಿಎಲ್ ಕ್ರಿಕೆಟ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ಇಂದಿನ ಒತ್ತಡದ ಜೀವನದಲ್ಲಿ ಕ್ರೀಡೆಗಳು ಮನಸ್ಸಿಗೆ ನೆಮ್ಮದಿ ಮತ್ತು ಉಲ್ಲಾಸವನ್ನು ನೀಡುತ್ತವೆ. ಸಣ್ಣ ಹಳ್ಳಿಗಳಲ್ಲಿ ಯುವಕರು ಒಗ್ಗೂಡಿ ನಮ್ಮೂರಿನಲ್ಲಿ ನಾವು ಕ್ರೀಡೆಯನ್ನು ಆಯೋಜಿಸಬೇಕು ಎಂಬ ಮನೋಭಾವ ಬೆಳೆಸಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮುಜ್ಜು ಮತ್ತು ಶಮ್‌ಶೀರ್ ಮಾಲಿಕತ್ವದ ಕಾನಗೋಡು ರಾಕರ್ಸ್ ತಂಡ ಪ್ರಥಮ ಸ್ಥಾನ ಪಡೆದರು. ಆರಕ್ಷಕ ಪ್ರದೀಪ್ ಮಾಲಿಕತ್ವದ ತಂಡ ಸೊರಬ ಸೂಪರ್ ಕಾಪ್ಸ್ ದ್ವಿತೀಯ ಸ್ಥಾನ ಗಳಿಸಿತು. ಮಂಜು ನಾಯ್ಕ ಅವರ ಸಿಎನ್‌ಸಿ ಕ್ರಿಕೆಟರ್ಸ್ ಹಾಗೂ ನಿಖಿಲ್, ದಿನೇಶ್ ಶಿವಪುರ ಮಾಲಿಕತ್ವದ ಎಸ್‌ಕೆ ಚಾಲೆಂಜರ್ಸ್ ತಂಡಗಳು ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನ ಪಡೆದುಕೊಂಡರು. ಇನ್ನು ಉಳಿದಂತಹ ತಂಡಗಳಿಗೆ ಶಿಸ್ತು ಬದ್ಧ ಹಾಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಉತ್ತಮವಾಗಿ ಪ್ರದರ್ಶನ ನೀಡಿದ ಕ್ರೀಡಾಪಟುಗಳನ್ನು ಗುರುತಿಸಿ ಆಕರ್ಷಕ ಟ್ರೋಫಿ ವಿತರಿಸಲಾಯಿತು.ಗ್ರಾಪಂ ಸದಸ್ಯ ಸಲೀಂ, ಜಗದೀಶ್, ದಿನೇಶ್, ಶಿಕ್ಷಕ ಈರಪ್ಪ ನಾಯ್ಕ, ಮಂಜುನಾಥ್ ಶೇಟ್, ಅಜೀಮ್, ನೌಶಾದ್, ಅಜೀಜ್ ಸಾಬ್, ನಿಖಿಲ್, ಕೀರ್ತಿ ನಾಯ್ಕ, ಲೋಕೇಶ್, ಪ್ರವೀಣ್, ರವಿಕಿರಣ್, ಪುನೀತ್ ಬಡಿಗೇರ್, ಸೇರಿದಂತೆ ಗ್ರಾಮದ ಸಂಘಟಕರು ಉಪಸ್ಥಿತರಿದ್ದರು.