ಪರಸ್ಪರ ಸೌಹಾರ್ದತೆ, ಪ್ರೀತಿ ವಿಶ್ವಾಸ ಬೆಳೆಸಲಿದೆ ಕ್ರೀಡೆ: ಛಲವಾದಿ

| Published : Feb 14 2025, 12:32 AM IST

ಪರಸ್ಪರ ಸೌಹಾರ್ದತೆ, ಪ್ರೀತಿ ವಿಶ್ವಾಸ ಬೆಳೆಸಲಿದೆ ಕ್ರೀಡೆ: ಛಲವಾದಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಕ್ರೀಡೆ ಪರಸ್ಪರ ಸೌಹಾರ್ದತೆ ಮತ್ತು ಪ್ರೀತಿ ವಿಶ್ವಾಸ ಬೆಳೆಸುವ ಜೊತೆಗೆ ಕ್ರೀಡಾಪಟುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಛಲವಾದಿ ಹೇಳಿದರು.

ಕೊಪ್ಪ ಕೆಳಗಿನಪೇಟೆಯ ತೋಮರಶೆಟ್ಟಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಕನ್ನಡಪ್ರಭ ವಾರ್ತೆ, ಕೊಪ್ಪ

ಕ್ರೀಡೆ ಪರಸ್ಪರ ಸೌಹಾರ್ದತೆ ಮತ್ತು ಪ್ರೀತಿ ವಿಶ್ವಾಸ ಬೆಳೆಸುವ ಜೊತೆಗೆ ಕ್ರೀಡಾಪಟುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಛಲವಾದಿ ಹೇಳಿದರು.ಬುಧವಾರ ಕೊಪ್ಪ ಕೆಳಗಿನಪೇಟೆಯ ತೋಮರಶೆಟ್ಟಿ ಶಾಲೆಯಲ್ಲಿ ಆಯೋಜನೆಗೊಂಡ ಶಾಲೆ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಯಲ್ಲಿ ಮಾತನಾಡಿ, ಮಕ್ಕಳು ಶಿಕ್ಷಣದ ಜೊತೆಜೊತೆಯಲ್ಲಿಯೇ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಯನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳಗಿಸಬೇಕು ಎಂದರು.

ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತ ತಲುಪಿದ ಶಾಲೆ ಇದೀಗ ಪ್ರತೀವರ್ಷ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ ಕೊಂಡು ಉತ್ತಮ ಶಿಕ್ಷಣಕ್ಕೆ ಮನೆಮಾತಾಗಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲೂ ಹೆಸರು ಗಳಿಸಿದ್ದಾರೆ. ಸರ್ಕಾರಿ ಶಾಲೆ ಉಳಿವಿಗೆ ಪೋಷಕರು, ದಾನಿಗಳು, ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಿದ್ದು ಶಾಲೆ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. ಪ.ಪಂ. ಸದಸ್ಯೆ ಮೈತ್ರಾ ಗಣೇಶ್ ಮಾತನಾಡಿ ಶಾಲೆ ಉತ್ತಮ ಕಾರ್ಯಚಟುವಟಿಕೆಯಿಂದ ಮನೆಮಾತಾಗಿದ್ದು ಹೆಚ್ಚಿನ ಮಕ್ಕಳು ಶಾಲೆಗೆ ಸೇರಲು ಕಾರಣ. ಮುಂದಿನ ದಿನಗಳಲ್ಲಿ ಶಾಲೆ ಇನ್ನು ಹೆಚ್ಚಿನ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ್ ಮಾತನಾಡಿ ಈ ಬಾರಿ ಶಾಲೆಯ ಇಬ್ಬರು ಮಕ್ಕಳು ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಪ್ರವೇಶಿಸಿದ್ದು ಮುಂದಿನ ವರ್ಷ ಈ ಸಂಖ್ಯೆ ಕನಿಷ್ಠ ೨೦ರಷ್ಟಾಗಬೇಕು. ಯಾವುದೇ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ. ಶಾಲಾಭಿವೃದ್ಧಿ ಸಮಿತಿಯೊಂದಿಗೆ ಶಾಲಾ ಪುನಶ್ಚೇತನ ಸಮಿತಿ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಶಾಲಾ ಸ್ಥಳ ದಾನ ಕುಟುಂಬದ ಸತೀಶ್ ಶೆಟ್ಟಿ, ಬೆಂಗಳೂರಿನ ಸಂಪತ್ ಕುಮಾರ್ ಸೇರಿದಂತೆ ಅನೇಕ ದಾನಿಗಳು ಶಾಲೆಯ ಅಭಿವೃದ್ಧಿಗೆ ಪ್ರತೀ ಹಂತದಲ್ಲೂ ಕೈಜೋಡಿಸಿ ಸಹಕರಿಸುತ್ತಿದ್ದಾರೆ. ಇದು ಶಾಲಾಭಿವೃದ್ಧಿಗೆ ಮುಖ್ಯ ಕಾರಣವಾಗಿದೆ ಎಂದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪದ್ಮಾವತಿ ರಮೇಶ್, ಸ್ಪಂದನ ಸಮಿತಿ ಫ್ರಾನ್ಸಿಸ್ ಕರ್ಡೋಜ, ಶಾಲಾ ಮುಖ್ಯ ಶಿಕ್ಷಕಿ ಶೈಲಾ, ಸಹಶಿಕ್ಷಕ ಮಾರುತಿ ಪ್ರಸಾದ್, ದೈಹಿಕ ಶಿಕ್ಷಣ ಶಿಕ್ಷಕ ವಿಜೇಂದ್ರ ಮುಂತಾದವರು ಶುಭ ಹಾರೈಸಿದರು. ವಿವಿಧ ಕ್ರೀಡಾಕೂಟಗಳಿಗೆ ಶಾಲಾ ವಿದ್ಯಾರ್ಥಿಗಳ ತಂಡ ರಚಿಸಿದ್ದು ಪ್ರತೀ ತಂಡಕ್ಕೂ ವಿದ್ಯಾರ್ಥಿಗಳೇ ಸೂಚಿಸಿದ ಹೆಸರನ್ನು ಇಡಲಾಗಿದೆ. ಶಾಲಾ ಮಕ್ಕಳ ತಂಡದಿಂದ ಕಬ್ಬಡ್ಡಿ, ಪುಟ್ಟಮಕ್ಕಳೊಂದಿಗೆ ಮ್ಯೂಸಿಕಲ್ ಛೇರ್, ಕೆರೆ ದಡ, ಪಾಸಿಂಗ್ ಬಾಲ್, ಬಾಸ್ಕೆಟ್ ಬಾಲ್ ವಿವಿಧ ಸ್ಥಳೀಯ ಕ್ರೀಡೆಗಳನ್ನು ಆಯೋಜಿಸಲಾಯಿತು. ಶಾಲಾ ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.