ಕುವೆಂಪು ಜನಿಸಿದ ಜಿಲ್ಲೆಯಲ್ಲಿ ಕನ್ನಡ ಸೊಗಡು ಹರಡಿ: ಶಾಸಕ ಎಚ್.ಡಿ.ತಮ್ಮಯ್ಯ

| Published : Feb 27 2025, 12:32 AM IST

ಕುವೆಂಪು ಜನಿಸಿದ ಜಿಲ್ಲೆಯಲ್ಲಿ ಕನ್ನಡ ಸೊಗಡು ಹರಡಿ: ಶಾಸಕ ಎಚ್.ಡಿ.ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯದ ಲೋಕದ ದಿಗ್ಗಜ ಕುವೆಂಪು ಜನಿಸಿದ ಜಿಲ್ಲೆಯಲ್ಲಿ ಕನ್ನಡದ ತೇರನ್ನು ಒಂದಾಗಿ ಎಳೆದು, ಮುಂದಿನ ಪೀಳಿಗೆಗೆ ಭಾಷಾ ಸೊಗಡನ್ನು ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರು ಹೊರಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸೇವಾದೀಕ್ಷಾ । ಮಾತೃಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಾಹಿತ್ಯದ ಲೋಕದ ದಿಗ್ಗಜ ಕುವೆಂಪು ಜನಿಸಿದ ಜಿಲ್ಲೆಯಲ್ಲಿ ಕನ್ನಡದ ತೇರನ್ನು ಒಂದಾಗಿ ಎಳೆದು, ಮುಂದಿನ ಪೀಳಿಗೆಗೆ ಭಾಷಾ ಸೊಗಡನ್ನು ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರು ಹೊರಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸೇವಾದೀಕ್ಷಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಹಲವಾರು ಭಾಷೆಗಳಿವೆ. ಅವುಗಳಲ್ಲಿ ಅತ್ಯಂತ ಸುಂದರವಾದ ಭಾಷೆ ಕನ್ನಡ. ಸುಲಭವಾಗಿ ಕಲಿತುಕೊಳ್ಳಲು, ಅರ್ಥಮಾಡಿಕೊಳ್ಳಲು ಪೂರಕ ಎಂದ ಅವರು ಬದುಕು ಅಥವಾ ವೃತ್ತಿಗನುಸಾರ ಅನ್ಯ ಭಾಷೆ ಕಲಿಯುವುದು ತಪ್ಪಲ್ಲ. ಆದರೆ ಮಾತೃಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಅತಿಮುಖ್ಯ ಎಂದರು.

ಮಾತೃಭಾಷೆ ಕನ್ನಡಕ್ಕೆ ಧಕ್ಕೆಯುಂಟಾದಲ್ಲಿ ಹೊಂದಾಣಿಕೆ ಪ್ರಶ್ನೆ ಇರಬಾರದು. ನ್ಯಾಯಬದ್ಧ ಹೋರಾ ಟಕ್ಕೆ ಎಲ್ಲರೂ ಸಜ್ಜಾಗಬೇಕು. ಜೊತೆಗೆ ಕನ್ನಡಪರ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡು ಭಾಷೆಯ ಪರಿಮಳವನ್ನು ಎಲ್ಲೆಡೆ ಹಬ್ಬಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಕಸಾಪದಲ್ಲಿ ಅಜ್ಜಂಪುರ ಸೂರಿ, ಚಂದ್ರಯ್ಯನಾಯ್ಡು ಕಾಲಘಟ್ಟದಲ್ಲಿ ಅನೇಕ ಕಾರ್ಯಕ್ರಮಗಳು ಹಮ್ಮಿ ಕೊಂಡು ಭಾಷೆಯ ಸಂಸ್ಕೃತಿ ಸಕ್ರೀಯವಾಗಿ ಪರಿಚಯಿಸಿದ್ದರು. ಆದರೀಗ ಕನ್ನಡ ಉಳಿವಿಗಾಗಿ ಹೋರಾಟ ಮಾಡುತ್ತಿರುವುದು ವಿಷಾದನೀಯ. ಹೀಗಾಗಿ ಕನ್ನಡಿಗರು ಎದೆಗುದದೇ ಹಿರಿಯ ಮಾರ್ಗದರ್ಶನದಲ್ಲಿ ಸಾಗಬೇಕಿದೆ ಎಂದರು.

ಆಧುನಿಕತೆ ಬೆಳೆದಂತೆ ಮಕ್ಕಳು ಕೂಡಾ ಅಪ್ಪ-ಅಮ್ಮ ಎನ್ನುವ ಬದಲು, ಮಮ್ಮಿ-ಡ್ಯಾಡಿ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ. ಆಟೋಟ ಸ್ಪರ್ಧೆಗಳಲ್ಲಿ ಮಕ್ಕಳು ಎಡವಿ ಬಿದ್ದರೆ, ತಕ್ಷಣವೇ ಬಾಯಿಗೆ ಕನ್ನಡದ ಅಮ್ಮ ಎನ್ನುವ ಪದ ಬರಲಿದೆ. ಹೀಗಾಗಿ ಆಂಗ್ಲ ವ್ಯಾಮೋಹಕ್ಕೆ ಒಳಗಾಗದೇ ಭಾಷೆಯನ್ನು ಉಸಿರಾಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಸ್ಕೃತಿ ಚಿಂತಕ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ ಎರಡು ಸಾವಿರ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ವಿಶೇಷತನವಿದೆ. ನಾಡಿನ ಖ್ಯಾತ ಕವಿಗಳು, ಸಾಹಿತಿಗಳ ಭವ್ಯ ಕೃತಿಗಳಿಗೆ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿ ನಾಡಿಗೆ ಒಲಿದು ಬಂದಿದೆ. ಈ ಪುಣ್ಯಭೂಮಿಯಲ್ಲಿ ಜನಿಸಿರುವ ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ಗರಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ನೂತನ ಅಧ್ಯಕ್ಷರು ಕನ್ನಡಾಂಬೆಯ ಸೇವೆಯಲ್ಲಿ ತೊಡಗುವ ಮೂಲಕ ತಾಲ್ಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿ ಕನ್ನಡ ಕಾರ್ಯಕ್ರಮ ಹಮ್ಮಿಕೊಂಡು ಸಾಹಿತ್ಯಾಸಕ್ತರನ್ನು ಗುರುತಿಸಿ ವೇದಿಕೆಗೆ ಕರೆತರಬೇಕು ಎಂದು ಸೂಚಿಸಿದರು.

ನಿಕಟಪೂರ್ವ ಅಧ್ಯಕ್ಷ ಬಿಸಲೇನಹಳ್ಳಿ ಸೋಮಶೇಖರ್ ಮಾತನಾಡಿ, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಕನ್ನಡ ಕಟ್ಟುವ ಕಾಯಕದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಅಲ್ಲದೇ ತಾಲೂಕು ಮಟ್ಟದ ಸಮ್ಮೇಳನ ಹಮ್ಮಿಕೊಂಡು ಕವಿಗಳು, ಲೇಖಕರು, ಬರಹಗಾರರ ಒಂದೆಡೆ ಸೇರಿಸಿ ಯಶಸ್ವಿಗೊಳಿಸಿದ್ದೇನೆ ಎಂದರು.

ತಾಲೂಕು ಪದಾಧಿಕಾರಿಗಳಾದ ಮಾವಿನಕೆರೆ ದಯಾನಂದ್ (ಅಧ್ಯಕ್ಷ), ಹಳೇಬೀಡ ಬಸವರಾಜು (ಗೌ. ಕಾರ್ಯದರ್ಶಿ), ಆಶಾ ರಾಜು (ಕೋಶಾಧ್ಯಕ್ಷೆ), ಡಿ.ರಘು, ಎಚ್.ಸಿ.ಲಾವಣ್ಯ, ಕಾಂತರಾಜು, ಜೆ. ಸುನಿಲ್, ಸಯ್ಯದ್ ತಾಜುದ್ದೀನ್ (ಸಹ ಕಾರ್ಯದರ್ಶಿ), ಡಾ.ಎಚ್.ಅಹ್ಮದ್ ಷರೀಫ್ (ಸಂಘಟನಾ ಕಾರ್‍ಯದರ್ಶಿ) ಸೇವಾ ದೀಕ್ಷೆಯನ್ನು ಪಡೆದರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಕೋಶಾಧ್ಯಕ್ಷ ಬಿ. ಪ್ರಕಾಶ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಎಚ್.ಕೆ.ವಿಜಯಲಕ್ಷ್ಮೀ, ಅಂಬಳೆ ಹೋಬಳಿ ಅಧ್ಯಕ್ಷೆ ಕೆ.ಜಿ.ಮಾಸ್ತೇಗೌಡ, ಖಾಂಡ್ಯ ಅಧ್ಯಕ್ಷ ಹುಣಸೇಹಳ್ಳಿ ರಾಜಪ್ಪಗೌಡ ಮತ್ತಿತರರು ಹಾಜರಿದ್ದರು.