ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮಾಜದ ಎಲ್ಲೆಡೆ ಪಸರಿಸುವಂತೆ ಮಾಡಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮಾಜದ ಎಲ್ಲೆಡೆ ಪಸರಿಸುವಂತೆ ಮಾಡಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಕರೆ ನೀಡಿದರು.ಚಿಕ್ಕ ಅಳುವಾರ ಜ್ಞಾನ ಕಾವೇರಿ ಆವರಣದ ಹಾರಂಗಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಮತ್ತು ವಿಶ್ವಮಾನವ ದಿನಾಚರಣೆ ಕಾರ್ಯವನ್ನುದ್ದೇಶಿಸಿ ಮಾತನಾಡಿದ ಅವರು, ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು "ಜಾತಿ, ಮತ "ದ ಕಟ್ಟುಪಾಡುಗಳಿಂದ ಮಗುವನ್ನು ಅಲ್ಪ ಮಾನವನನ್ನಾಗಿ ಬಂಧಿಸಲಾಗುತ್ತದೆ. ಮತ್ತೆ ಅವರನ್ನು ವಿಶ್ವಮಾನವರನ್ನಾಗಿಸುವ ಜವಾಬ್ದಾರಿ ನಮ್ಮೆಲ್ಲರದು.
ಮನುಜ ಮತ, ವಿಶ್ವಪಥ, ಸಮನ್ವಯ, ಪೂರ್ಣದೃಷ್ಟಿ, ಸರ್ವೋದಯ ಎಂಬ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಪಸರಿಸುವ ಮೂಲಕ ಜಾತಿ, ಮತ, ಧರ್ಮದ ಗಡಿಗಳನ್ನು ಮೀರಿ ಮಾನವನ ವೈಚಾರಿಕ ಮತ್ತು ನೈತಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಬುದ್ಧ ಮತ್ತು ಬಸವಣ್ಣನವರಂತೆ ಸ್ವತಂತ್ರವಾಗಿ ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ಬೋಧಕೇತರ ವೃಂದ, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.