ಸಾರಾಂಶ
ತಾಲೂಕು ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಡಾ. ಸೋಮಶೇಖರ
ಕನ್ನಡಪ್ರಭ ವಾರ್ತೆ ಹಾನಗಲ್ಲಇಡೀ ಜಗತ್ತಿನಾದ್ಯಂತ ಈಗ ಶರಣ ತತ್ವ ಒಪ್ಪಿ ಬದುಕುವ ಕಾಲ ಸನ್ನಿಹಿತವಾಗಿದ್ದು, ವಚನಕಾರರ ಅನುಭಾವದ ಸತ್ಯ ಸಂದೇಶ ಇನ್ನು ಹೆಚ್ಚು ಪ್ರಚಾರ ಮಾಡುವ ತೀರ ಅಗತ್ಯವಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ ತಿಳಿಸಿದರು.
ಇಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ತಾಲೂಕು ಘಟಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಶರಣರ ಪವಿತ್ರ ನೆಲ. ಇಲ್ಲಿನ ಪ್ರತಿ ಮನೆ ಮನಸ್ಸಿಗೆ ಶರಣ ಸಂದೇಶ ತಲುಪಬೇಕು. ಈಗ ಇಡೀ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎಲ್ಲ ತಾಲೂಕು ಜಿಲ್ಲಾ ಘಟಕಗಳನ್ನು ಹೆಚ್ಚು ಜಾಗೃತಗೊಳಿಸುವ ಪ್ರಕ್ರಿಯೆ ಜಾಗೃತಗೊಳಿಸಲಾಗಿದೆ. ಸುತ್ತೂರು ಜಗದ್ಗುರುಗಳು ದೂರದೃಷ್ಠಿಯಿಂದ ಶರಣ ಸಾಹಿತ್ಯ ಪರಿಷತ್ತ ಸ್ಥಾಪಿಸಿ ವಚನಗಳ ಪ್ರಚಾರ ಪ್ರಸಾರ ಹಾಗೂ ಶರಣರ ಸತ್ಯ ಸಂದೇಶ ಎಲ್ಲರಿಗೂ ತಲುಪಿಸುವ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.ರಾಜ್ಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಹಾಗೂ ದತ್ತಿ ನಿಧಿಗಳನ್ನು ಸ್ಥಾಪಿಸಲು ಈಗ ಹೆಚ್ಚು ಗಮನ ನೀಡಲಾಗಿದೆ. ಹತ್ತು ಹಲವು ಶರಣ ಸಂದೇಶ ಸಾರುವ ಹೊತ್ತಿಗೆ ಪರಿಷತ್ತು ಮುದ್ರಿಸಿದೆ. ಇನ್ನೂ ಆ ಕಾರ್ಯದಲ್ಲಿ ಮುನ್ನಡೆಯಬೇಕಾಗಿದೆ. ಶರಣರ ತತ್ವಗಳ ಪ್ರಸಾರ ಒಂದು ಪುಣ್ಯ ಕಾರ್ಯ.ನಾವೆಲ್ಲ ಕೈ ಜೋಡಿಸೋಣ. ಸಮಾಜಮುಖಿ ಚಿಂತನೆಗೆ ಒಗ್ಗೂಡಿ ಕೆಲಸ ಮಾಡೋಣ. ರಾಜ್ಯ ಹೊರ ರಾಜ್ಯಗಳಲ್ಲಿ ಶರಣ ಸಾಹಿತ್ಯ ಪರಿಷತ್ತು ಕ್ರಿಯಾಶೀಲವಾಗದೆ.ಈಗ ಹೊಸ ಸಂಚಲನ ಮೂಡಿಸಲು ಇಡೀ ರಾಜ್ಯದ ಜಿಲ್ಲಾ ತಾಲೂಕು ನಗರ ಘಟಕಗಳು ಮುಂದಾಗಬೇಕು.ಕದಳಿ ಮಹಿಳಾ ವೇದಿಕೆ ಕೂಡ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಇಡೀ ರಾಜ್ಯದ ಎಲ್ಲ ಜಿಲ್ಲಾ ಘಟಕಗಳ ಸಭೆ ನಡೆಸಿ ತಾಲೂಕು ನಗರ ಘಟಕಗಳನ್ನು ಇನ್ನಷ್ಷು ಚಿಂತನಶೀಲ, ಕ್ರಿಯಾಶೀಲಗೊಳಿಸಲು ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದರು.
ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಮಾತನಾಡಿ, ಸಮಾಜಕ್ಕೆ ಒಳಿತಾಗುವ ನಡೆ ನಮ್ಮದಾಗಬೇಕು.ನಮ್ಮ ವೈಯಕ್ತಿ ಜೀವನ ಸಾಧನೆಯ ಜತೆಗೆ ಪರೋಪಕಾರ, ಸಮಾಜಮುಖಿ ಆಲೋಚನೆಗೆ ಇಂಬು ನೀಡಬೇಕು.ನಾಳೆಗಳು ಸುಂದರವಾಗಲಿ ಇಂದೇ ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕು. ಶರಣ ಸಾಹಿತ್ಯದ ಚಟುವಟಿಕೆಗಳಿಗೆ ಸದಾ ನನ್ನ ಬೆಂಬಲವಿದೆ ಎಂದರು.ಜಿಲ್ಲಾಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ವಚನ ಚಿಂತನ, ಮನೆ ಮನೆಗಳಲ್ಲಿ ಮಹಾಮನೆ, ಶರಣ ಸಂಗಮಗಳ ಮೂಲಕ ಪರಿಷತ್ತಿನ ಚಟುವಟಿಕೆ ಸಕ್ರೀಯವಾಗಿ ಮುನ್ನಡೆಸಲಾಗುತ್ತಿದೆ. ಈಗ ಮತ್ತೆ ಇಡೀ ಜಿಲ್ಲೆಯ ತಾಲೂಕು ಹಾಗೂ ನಗರ ಘಟಕ ಪುನಶ್ಚೇತನಗೊಳಿಸಲು ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ ನೇತೃತ್ವದಲ್ಲಿ ಮುನ್ನಡೆಯಲಾಗುತ್ತದೆ. ಪರಿಷತ್ತಿನ ಜತೆಗೆ ಹಲವು ಸಂಘಟನೆಗಳು ನಮ್ಮೊಂದಿಗೆ ಕೈಜೋಡಿಸಿವೆ ಎಂದರು.
ಜಿಲ್ಲಾ ಕಾರ್ಯದರ್ಶಿ ನಿರಂಜನ ಗುಡಿ, ತಾಲೂಕಾಧ್ಯಕ್ಷ ಎಸ್.ಸಿ. ಕಲ್ಲನಗೌಡರ, ಉಪಾಧ್ಯಕ್ಷ ಅಶೋಕ ದಾಸರ್, ಪ್ರವೀಣ ಬ್ಯಾತನಾಳ, ಎಸ್.ವಿ. ಹೊಸಮನೆ, ವಸಂತ ಚಿಕ್ಕಣ್ಣನವರ, ಮಲ್ಲಿಕಾರ್ಜು ಅಮರದ, ಸುಮಂತ ತುಪ್ಪದ, ಸಂತೋಷ ದೊಡ್ಡಮನಿ, ಕದಳಿ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಗೌರವಾಧಕ್ಷೆ ಅಕ್ಕಮ್ಮ ಶೆಟ್ಟರ, ಕಾರ್ಯದರ್ಶಿ ರೇಖಾ ಶೆಟ್ಟರ, ಅನಿತಾ ಕಿತ್ತೂರ, ಕೆ.ಕೆ.ರೂಪಶ್ರೀ, ವಿಜಯಲಕ್ಷ್ಮೀ ಹಳ್ಳೀಕೇರಿ, ಪಂಕಜಾ ಅರಳಲಿಮಠ, ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕದಳಿ ಮಹಿಳಾ ವೇದಿಕೆ ಸದಸ್ಯರು ಪ್ರಾರ್ಥನೆ ಹಾಡಿದರು. ಪ್ರವೀಣ ಬ್ಯಾತನಾಳ ಸ್ವಾಗತಿಸಿದರು. ಎಚ್.ಸುಧಾ ವಂದಿಸಿದರು.