ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
1965ರಲ್ಲಿ ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರುಗಳ ವಿಮಾನವನ್ನು ಹೊಡೆದುರುಳಿಸಿ ದೇಶಕ್ಕಾಗಿ ಬಲಿದಾನಗೈದ ಕೊಡಗಿನ ವೀರ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸಾಹಸಗಾಥೆಯ ಸ್ಕೈ ಫೋರ್ಸ್ ಬಾಲಿವುಡ್ ಸಿನಿಮಾ ಜ.24 ರಂದು ಬಿಡುಗಡೆಯಾಗುತ್ತಿದೆ.ಬೊಳ್ಳಜಿರ ಬಿ.ಅಯ್ಯಪ್ಪ ನೇತೃತ್ವದ ಕೊಡವ ಮಕ್ಕಡ ಕೂಟ ಹೊರತಂದಿರುವ ಪತ್ರಕರ್ತ ಹಾಗೂ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರು ಬರೆದಿರುವ ‘1965ರ ಯುದ್ಧ ಹಾಗೂ ಮಹಾವೀರ ಚಕ್ರ ಪುರಸ್ಕೃತ ಸ್ಕ್ವಾ.ಲೀ ಅಜ್ಜಮಾಡ ಬಿ.ದೇವಯ್ಯ ಅವರ ಜೀವನಾಧರಿತ ಪುಸ್ತಕವನ್ನು ಆಧರಿಸಿ ಸ್ಕೈ ಫೋರ್ಸ್ ಚಿತ್ರವನ್ನು ತಯಾರಿಸಲಾಗಿದೆ.
ಮ್ಯಾಡಾಕ್ ಫಿಲ್ಮ್ಸ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್, ಅಮರ್ ಕೌಶಿಕ್ ಹಾಗೂ ಜ್ಯೋತಿ ದೇಶಪಾಂಡೆ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಂದೀಪ್ ಕೇವಾಲಾನಿ ಹಾಗೂ ಅಭಿಷೇಕ್ ಅನಿಲ್ ಕಪೂರ್ ಜಂಟಿಯಾಗಿ ಸಿನಿಮಾ ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ವೀರ್ ಪಹಾಡಿಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಾರಾ ಅಲಿ ಖಾನ್, ನಿಮ್ರತ್ ಕೌರ್ ಮತ್ತು ಶರದ್ ಕೇಳ್ಕರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಚಿತ್ರ ಜ.24ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರ ಟ್ರೈಲರ್ ಬಿಡುಗಡೆಯಾಗಿ ದೇಶಪ್ರೇಮದ ಕಿಚ್ಚನ್ನು ಹಚ್ಚಿದೆ, ಚಿತ್ರಾಭಿಮಾನಿಗಳು ಸ್ಕೈ ಫೋರ್ಸ್ ಗಾಗಿ ಎದುರು ನೋಡುತ್ತಿದ್ದಾರೆ.1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ನೈಜ ಘಟನೆಯನ್ನು ಆಧರಿಸಿ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಪಾಕಿಸ್ತಾನದ ಸರ್ಗೋಧಾ ವಾಯುನೆಲೆ ಮೇಲೆ ಭಾರತೀಯ ವಾಯುಸೇನೆ ವೈಮಾನಿಕ ದಾಳಿ ನಡೆಸಿತು. ಇದು ಭಾರತೀಯ ವಾಯುಪಡೆಯ ಮೊದಲ ಮತ್ತು ಅತ್ಯಂತ ಮಾರಣಾಂತಿಕ ದಾಳಿ ಎಂದು ಪರಿಗಣಿಸಲಾಗಿದೆ. ಚಿತ್ರದಲ್ಲಿ ದೇಶಪ್ರೇಮದ ಜೊತೆಗೆ ಸಾಹಸ ದೃಶ್ಯಗಳಿಗೆ ಆದ್ಯತೆ ನೀಡಲಾಗಿದ್ದು, ಭಾರತೀಯ ವಾಯುಪಡೆಯ ಧೈರ್ಯದ ಪ್ರತೀಕ ಎಂಬಂತೆ ಚಿತ್ರಿಸಲಾಗಿದೆ.
1965ರ ಭಾರತ-ಪಾಕ್ ಯುದ್ಧದಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ಬದುಕಿ ಹಿಂದಕ್ಕೆ ಬರುವ ಅವಕಾಶಗಳಿತ್ತು. ಆದರೆ, ಈ ಅವಕಾಶವನ್ನು ಕೈಬಿಟ್ಟು ಶತ್ರು ರಾಷ್ಟ್ರ ಪಾಕ್‌ನ ಅತ್ಯಾಧುನಿಕ ಯುದ್ಧವಿಮಾನವನ್ನು ಕೆಚ್ಚೆದೆಯ ಸಾಹಸದ ಮೂಲಕ ಹೊಡೆದುರುಳಿಸಿ ಹುತಾತ್ಮರಾದರು. ಅವರ ಈ ಮಹಾನ್ ಬಲಿದಾನ ಹಲವಾರು ವರ್ಷಗಳ ಬಳಿಕ ಪಾಕ್ ಸೇನೆಯ ಅಧಿಕಾರಿಯೊಬ್ಬರನ್ನು ಬಿಬಿಸಿಯವರು ಸಂದರ್ಶನ ಮಾಡಿದ ಸಂದರ್ಭ ಬೆಳಕಿಗೆ ಬಂದಿತು.ಶೌರ್ಯ ಮೆರೆದು ಹುತಾತ್ಮರಾದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ಪುರಸ್ಕಾರ ನೀಡಲಾಯಿತು. ಇವರ ಸಾಹಸಗಾಥೆಯನ್ನು ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರು ತಮ್ಮ ಪುಸ್ತಕದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ವೀರ ಸೇನಾನಿಯ ಪುಸ್ತಕ ರಚನೆಗೆ ಪ್ರೇರಣೆ ನೀಡಿದ ಮತ್ತು ಪುಸ್ತಕವನ್ನು ಹೊರತಂದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸತತ ಪರಿಶ್ರಮದ ಮೂಲಕ ಮಡಿಕೇರಿಯ ಹೃದಯ ಭಾಗದಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.