ಮರಳಿನಲ್ಲಿ ಅಳಿಲು, ಎಲೆಯಲ್ಲಿ ರಾಮ!

| Published : Jan 21 2024, 01:35 AM IST

ಸಾರಾಂಶ

ಕಲಾವಿದರಾದ ಶೀನಾಥ್ ಮಣಿಪಾಲ್ ರವಿ ಹಿರೇಬೆಟ್ಟು, ಪುರಂದರ್ ಮಲ್ಪೆ ಅವರು ಆಭರಣ ಜ್ಯುವೆಲ್ಲರ್ ನ ಸಹಯೋಗದೊಂದಿಗೆ ಕಾಪು ಕಡಲ ಕಿನಾರೆಯಲ್ಲಿ ಅಳಿಲಿನ ಮರಳು ಶಿಲ್ಪ ರಚಿಸಿ ರಾಮಾಯಣದಲ್ಲಿನ ಅಳಿಲಿನ ಸೇವೆಯನ್ನು ನೆನಪಿಸಿದರು.

ಕನ್ನಡಪ್ರಭ ವಾರ್ತೆ, ಕಾಪು

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಪ್ರಯುಕ್ತ ಮಣಿಪಾಲದ ಆರ್ಟಿಸ್ಟ್ ಫೋರಂ ನ ಕಲಾವಿದರಾದ ಶೀನಾಥ್ ಮಣಿಪಾಲ್ ರವಿ ಹಿರೇಬೆಟ್ಟು, ಪುರಂದರ್ ಮಲ್ಪೆ ಅವರು ಆಭರಣ ಜ್ಯುವೆಲ್ಲರ್ ನ ಸಹಯೋಗದೊಂದಿಗೆ ಕಾಪು ಕಡಲ ಕಿನಾರೆಯಲ್ಲಿ ಅಳಿಲಿನ ಮರಳು ಶಿಲ್ಪ ರಚಿಸಿ ರಾಮಾಯಣದಲ್ಲಿನ ಅಳಿಲಿನ ಸೇವೆಯನ್ನು ನೆನಪಿಸಿದರು. ಕಾಪು ಕಡಲ ಕಿನಾರೆಗೆ ಬಂದ ಪ್ರವಾಸಿದರು ಈ ಶಿಲ್ಪವನ್ನು ಕಣ್ತುಂಬಿಕೊಂಡರು.

ಅಶ್ವತ್ಥ ಎಲೆಯಲ್ಲಿ ರಾಮ

ಸಮಾಜ ಸೇವಕ ಗಣೇಶ್ ರಾಜ್ ಸರಳೇಬೆಟ್ಟು ಅವರು ಆಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಅಂಗೈಯಗಲದ ಅಶ್ವತ್ಥ ಎಲೆಯ ಮೇಲೆ ಕೋದಂಡರಾಮದ ಚಿತ್ರವನ್ನು ರಚಿಸಿದ್ದಾರೆ. ಇದನ್ನು ಪರ್ಕಳದ ಮಾರ್ಕೆಟ್ ರೋಡ್ ನಲ್ಲಿ ಆಯೋಜಿಸಲಾದ ರಾಮನ ಪ್ರತಿಷ್ಠಾಪನಾ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದೆ.ನಾಳೆ ಶ್ರೀ ಕೃಷ್ಣಮಠದಲ್ಲಿ ರಾಮೋತ್ಸವ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಲೋಕಾರ್ಪಣೆಯ ಸಂಭ್ರಮಾಚರಣೆಯನ್ನು ವಿಶಿಷ್ಟವಾಗಿಸುವ ನಿಟ್ಟಿನಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಜ. 22 ರಂದು ಶ್ರೀ ಕೃಷ್ಣ ಮಠದಲ್ಲಿ ರಾಮೋತ್ಸವ - ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

ಬೆಳಿಗ್ಗೆ 8 ಗಂಟೆಯಿಂದ 1 ಗಂಟೆಯವರೆಗೆ ಮಧ್ವ ಮಂಟಪದಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಭಕ್ತಾಭಿಮಾನಿಗಳಿಗೆ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ಎಲ್.ಇ.ಡಿ. ಪರದೆ ವ್ಯವಸ್ಥೆ ಮಾಡಲಾಗಿದ್ದು, ಶಾಸಕರ ವತಿಯಿಂದ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಿಗೆ ಹಾಲು ಪಾಯಸ ಸೇವೆ ಹಾಗೂ ಮಧ್ಯಾಹ್ನ 1 ಗಂಟೆಗೆ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಕರಸೇವಕರಾಗಿ ಸಲ್ಲಿಸಿದ್ದ ಕಾರ್ಯಕರ್ತರಿಗೆ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.ಬಡ ಕುಟುಂಬಕ್ಕೆ ಮನೆ: ಅಲ್ಲದೇ ಅಂದು ಕಲ್ಯಾಣಪುರ ಮೂಡು ತೋನ್ಸೆ ಗ್ರಾಮದ ಶ್ರೀ ಬೋಗ್ರ ಬೆಲ್ಚಡ ಅವರಿಗೆ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಹಿಂದೂ ಯುವಸೇನೆ ಉಡುಪಿ ನಗರ ಅಧ್ಯಕ್ಷ ಸುನೀಲ್ ನೇಜಾರ್ ಸಂಚಾಲಕತ್ವದಲ್ಲಿ ಶ್ರೀ ರಾಮ ಭಕ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಿರ್ಮಿಸಲ್ಪಟ್ಟ ನೂತನ ಮನೆ “ಅಯೋಧ್ಯೆ”ಯನ್ನು ಹಸ್ತಾಂತರಿಸುವ ಮೂಲಕ ರಾಮ ರಾಜ್ಯದ ಕನಸು ಸಾಕಾರಗೊಳಿಸುವ ಆಶಯ ಹೊಂದಿರುವುದಾಗಿ ಯಶ್ ಪಾಲ್ ತಿಳಿಸಿದ್ದಾರೆ.