ಸಾರಾಂಶ
ಧಾರವಾಡ: ಜನತಂತ್ರ ಮತ್ತು ಚುನಾವಣಾ ಸುಧಾರಣೆಯ ರಾಷ್ಟ್ರೀಯ ಆಂದೋಲನದ ಭಾಗವಾಗಿ ಭಾರತೀಯ ಚುನಾವಣಾ ಆಯೋಗದ ಸ್ವಾತಂತ್ರ್ಯ ಮತ್ತು ಎಲೆಕ್ಟ್ರೋಲ್ ಬಾಂಡ್ ಹಗರಣಗಳ ಕುರಿತಂತೆ ಹೋರಾಟ ನಡೆಸಲು ತಾವು ಮುಂದಾಗಿದ್ದೇವೆ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆಗ್ರಹಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಸರ್ಕಾರ ಚುನಾವಣಾ ಆಯೋಗವನ್ನು ಕಾರ್ಯಾಂಗದ ಕೈಗೊಂಬೆಯನ್ನಾಗಿ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಪ್ರಧಾನಿ ಮೋದಿ ಅವರು ಸರ್ವೋಚ್ಛ ನ್ಯಾಯಾಲಯದ ಚಾರಿತ್ರಿಕ ನಿರ್ಣಯದ ವಿರುದ್ಧ ತೆರಳುತ್ತಿದ್ದು, ಇದನ್ನು ಕೂಡಲೇ ಕೈಬಿಡಬೇಕು. ಇದಕ್ಕಾಗಿಯೇ ದೇಶಾದ್ಯಂತ ಚಳವಳಿ ಪ್ರಾರಂಭಿಸಲಾಗುತ್ತಿದ್ದು, ಜನರಿಗೆ ಇದರ ಕುರಿತು ಮನವರಿಕೆ ಮಾಡಿಕೊಡಲಾಗುವುದು. ಮುಖ್ಯ ಚುನಾವಣಾಧಿಕಾರಿ ನೇಮಕ ವಿಚಾರದಲ್ಲಿ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಿದರೆ ಇದರಿಂದ ಅವರ ಪರವಾಗಿ ಕೆಲಸ ಮಾಡುವವರೇ ಆ ಸ್ಥಾನಕ್ಕೆ ಬಂದು ಕುಳಿತುಕೊಳ್ಳುತ್ತಾರೆ. ಆ ರೀತಿ ಆಗಬಾರದು. ಈ ಹಿಂದಿನ ಚುನಾವಣೆಯಲ್ಲಿಯೂ ಪಕ್ಷಪಾತದಿಂದ ನಡೆದುಕೊಂಡ ಹಿನ್ನೆಲೆಯಲ್ಲಿ ಅವರು ಗೆಲುವು ಸಾಧಿಸಿದರು. ಆದರೆ, ಈ ಬಾರಿ ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳು ನಡೆಯದೇ ಚುನಾವಣೆ ಸ್ವತಂತ್ರವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.