ಮೂರನೇ ಶ್ರಾವಣ ಸೋಮವಾರ ಶ್ರೀಕುಮಾರಸ್ವಾಮಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

| Published : Aug 20 2024, 12:49 AM IST

ಮೂರನೇ ಶ್ರಾವಣ ಸೋಮವಾರ ಶ್ರೀಕುಮಾರಸ್ವಾಮಿ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ
Share this Article
  • FB
  • TW
  • Linkdin
  • Email

ಸಾರಾಂಶ

ಸಂಡೂರು ತಾಲೂಕಿನ ಸ್ವಾಮಿಮಲೈ ಅರಣ್ಯ ವಲಯದಲ್ಲಿರುವ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಮಾಸದ ಮೂರನೇ ಸೋಮವಾರ ಸಾವಿರಾರು ಭಕ್ತರು ಆಗಮಿಸಿದ್ದರು. ನೂರಾರು ಭಕ್ತರು ಪಾದಯಾತ್ರೆಯಲ್ಲಿ ಆಗಮಿಸಿದ್ದರು.

ಸಂಡೂರು: ತಾಲೂಕಿನ ಸ್ವಾಮಿಮಲೈ ಅರಣ್ಯ ವಲಯದಲ್ಲಿರುವ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಮಾಸದ ಮೂರನೇ ಸೋಮವಾರ ಸಾವಿರಾರು ಭಕ್ತರು ಆಗಮಿಸಿದ್ದರು.

ದೇವಸ್ಥಾನದ ಪ್ರಾಂಗಣದಲ್ಲಿರುವ ಶ್ರೀ ಕುಮಾರಸ್ವಾಮಿ, ಶ್ರೀ ಪಾರ್ವತಿ ದೇವಿ ಹಾಗೂ ಶ್ರೀ ನಾಗನಾಥೇಶ್ವರ ಹಾಗೂ ದೇವಸ್ಥಾನದ ಮಾರ್ಗದಲ್ಲಿ ಬರುವ ಶ್ರೀ ಹರಿಶಂಕರ ದೇವರ ದರ್ಶನ ಪಡೆದರು.

ಹಲವು ಭಕ್ತರು ಶ್ರೀ ಹರಿಶಂಕರ ದೇವಸ್ಥಾನದ ಬಳಿಯಲ್ಲಿ ವರ್ಷದಾದ್ಯಂತ ಕಲ್ಲಿನ ಬಸವಣ್ಣನ ಬಾಯಿಯಿಂದ ಸದಾ ಹರಿಯುವ ಪವಿತ್ರ ಮತ್ತು ಔಷಧೀಯ ಗುಣವಿದೆ ಎಂದು ನಂಬಿರುವ ನೀರನ್ನು ತಾವು ತಂದ ಬಾಟಲಿಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದುದು ಕಂಡು ಬಂದಿತು.

ಐದು ವರ್ಷದಲ್ಲಿ ಎರಡು ಬಾರಿ ನಡೆಯುವ ಶ್ರೀ ಕುಮಾರಸ್ವಾಮಿ ಜಾತ್ರೆ, ಶ್ರಾವಣ ಮಾಸದ ಮೂರನೇ ಸೋಮವಾರ ಹಾಗೂ ಸ್ಕಂದ ಷಷ್ಟಿಯಂದು ಶ್ರೀ ಕುಮಾರಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ನೆರವೇರಿಸಲಾಗುತ್ತದೆ. ಈ ದಿನಗಳಂದು ನಾಡಿನ ವಿವಿಧೆಡೆಗಳಿಂದ ಸಾವಿರಾರು ಸಂಖೆಯಲ್ಲಿ ಭಕ್ತರು ಆಗಮಿಸಿ, ದೇವರ ದರ್ಶನ ಭಾಗ್ಯ ಪಡೆಯುತ್ತಾರೆ.

ಶ್ರಾವಣ ಮಾಸದ ಮೂರನೇ ಸೋಮವಾರ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ವಿವಿಧೆಡೆಯಿಂದ ಹೆಚ್ಚಿನ ಸಂಖೆಯಲ್ಲಿ ಭಕ್ತರು ಬರುವ ಕಾರಣ, ಈ ಮಾರ್ಗದಲ್ಲಿ ಅದಿರು ಲಾರಿಗಳ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ನಸುಕಿನಿಂದಲೇ ನೂರಾರು ಭಕ್ತರು ಸಂಡೂರಿನಿಂದ ೧೨ ಕಿಮೀ ದೂರದಲ್ಲಿರುವ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಭಕ್ತರಿಗೆ ದೇವಸ್ಥಾನಕ್ಕೆ ಹೋಗಿಬರಲು ರಸ್ತೆ ಸಾರಿಗೆ ಸಂಸ್ಥೆಯವರು ವಿಶೇಷ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು.

ಮಧ್ಯಾಹ್ನ ದೇವಸ್ಥಾನದ ಬಳಿಯಲ್ಲಿ ಮಳೆ ಸುರಿದಿದ್ದರಿಂದ ನೂರಾರು ಭಕ್ತರು ಮಳೆಯಲ್ಲಿಯೇ ಸರತಿ ಸಾಲಿನಲ್ಲಿ ನಿಂತಿದ್ದರು. ದೇವಸ್ಥಾನಕ್ಕೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಹಾಗೂ ಸ್ಮಯೋರ್ ಸಂಸ್ಥೆಯ ಸಿಬ್ಬಂದಿ ನಿಯೋಜಿಸಲಾಗಿತ್ತು.