ಸಡಗರ-ಸಂಭ್ರಮದಿಂದ ನಡೆದ ಶ್ರೀಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ

| Published : Mar 26 2024, 01:00 AM IST

ಸಡಗರ-ಸಂಭ್ರಮದಿಂದ ನಡೆದ ಶ್ರೀಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣಿಯಲ್ಲಿ ತಳಿರು ತೋರಣ, ಪುಷ್ಪ ಹಾಗೂ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ತೆಪ್ಪಮಂಟಪದಲ್ಲಿ ಮಹೂರ್ತ ಪಠಣ ನಂತರ ಶ್ರೀ ಚೆಲುವನಾರಾಯಣಸ್ವಾಮಿ ವಿರಾಜಮಾನನಾದ ನಂತರ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಮಂಗಳವಾದ್ಯದ ನೀನಾದದಲ್ಲಿ ತೆಪ್ಪೋತ್ಸವ ಮೂರು ಪ್ರದಕ್ಷಿಣೆ ಹಾಕಿತು. ತೆಪ್ಪೋತ್ಸವ ಕಾರ್ಯಕ್ರಮಗಳು ರಾತ್ರಿ 9ಕ್ಕೆ ಮುಕ್ತಾಯವಾದವು.

ಕನ್ನಡಪ್ರಭ ವಾರ್ತೆ ಮೇಲುಕೋಟೆದಕ್ಷಿಣ ಭಾರತದ ಅತಿದೊಡ್ಡ ಮೇಲುಕೋಟೆ ಪಂಚ ಕಲ್ಯಾಣಿಯಲ್ಲಿ ವೈರಮುಡಿ ಬ್ರಹ್ಮೋತ್ಸವದ 7ನೇ ತಿರುನಾಳ್ ಅಂಗವಾಗಿ ಸೋಮವಾರ ರಾತ್ರಿ ವಿದ್ಯುತ್ ದೀಪಾಲಂಕಾರದೊಂದಿಗೆ ಶ್ರೀಚೆಲುವನಾರಾಯಣಸ್ವಾಮಿಗೆ ತೆಪ್ಪೋತ್ಸವ ಅದ್ಧೂರಿಯಾಗಿ ನೆರವೇರಿತು.

ಕಲ್ಯಾಣಿಯ ನಾಲ್ಕೂ ಕಡೆ ಸೋಪಾನಗಳಲ್ಲಿ ಕಿಕ್ಕಿರಿದು ತುಂಬಿದ್ದ ಭಕ್ತರು ಚೆಲುವನಾರಾಯಣನ ತೆಪ್ಪೋತ್ಸವದ ಸೊಬಗನ್ನು ದರ್ಶನ ಮಾಡಿ ಗೋವಿಂದನಾಮ ಘೋಷಣೆ ಕೂಗುತ್ತಾ ಸ್ವಾಮಿ ಜಲ ವಿಹಾರದ ವೈಭವ ದರ್ಶನ ಮಾಡಿ ಪುನೀತರಾದರು.

ವೈರಮುಡಿ ಬ್ರಹ್ಮೋತ್ಸವದ 7ನೇ ದಿನದ ಕಾರ್ಯಕ್ರಮವಾದ ಪಂಗುನ್ಯುತ್ತರಮ್ ನಿಮಿತ್ತ ತೆಪ್ಪೋತ್ಸವ ಸಡಗರ ದೇವಾಲಯದಲ್ಲಿ ಮನೆ ಮಾಡಿತ್ತು.

ಸಂಜೆಯಾಗುತ್ತಿದ್ದಂತೆ ಸಹಸ್ರಾರು ಸಂಖ್ಯೆಯ ಭಕ್ತರ ಚಿತ್ತ ಕಲ್ಯಾಣಿಯತ್ತ ಸಾಗಿತು. ಕಲ್ಯಾಣಿಯ ನಾಲ್ಕೂ ಕಡೆಯ ಸೋಪಾನಗಳ ಮೇಲೆ ಭಕ್ತರು ಕಿಕ್ಕಿರಿದು ತುಂಬಿದ್ದರು. ಸಂಜೆ 6.45ರ ವೇಳೆಗೆ ಮೈಸೂರು ಅರಸರಾದ ರಾಜ ಒಡೆಯರ್ ಸಮರ್ಪಿಸಿರುವ ವಜ್ರಖಚಿತ ರಾಜಮುಡಿ ಕಿರೀಟಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ಕಲ್ಯಾಣಿಗೆ ನೆರವೇರಿತು.

ಕಲ್ಯಾಣಿಯಲ್ಲಿ ತಳಿರು ತೋರಣ, ಪುಷ್ಪ ಹಾಗೂ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ತೆಪ್ಪಮಂಟಪದಲ್ಲಿ ಮಹೂರ್ತ ಪಠಣ ನಂತರ ಶ್ರೀ ಚೆಲುವನಾರಾಯಣಸ್ವಾಮಿ ವಿರಾಜಮಾನನಾದ ನಂತರ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಮಂಗಳವಾದ್ಯದ ನೀನಾದದಲ್ಲಿ ತೆಪ್ಪೋತ್ಸವ ಮೂರು ಪ್ರದಕ್ಷಿಣೆ ಹಾಕಿತು. ತೆಪ್ಪೋತ್ಸವ ಕಾರ್ಯಕ್ರಮಗಳು ರಾತ್ರಿ 9ಕ್ಕೆ ಮುಕ್ತಾಯವಾದವು.

ತೆಪ್ಪೋತ್ಸವದ ಹಿನ್ನೆಲೆಯಲ್ಲಿ ಯೋಗನರಸಿಂಹಸ್ವಾಮಿಬೆಟ್ಟ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ಕಲ್ಯಾಣಿ ಸಮುಚ್ಚಯದ ಸಾಲುಮಂಟಪಗಳು, ಭವ್ಯಸ್ಮಾರಕ ಭುವನೇಶ್ವರಿ ಮಂಟಪ, ಧಾರಾಮಂಟಪ ಗಜೇಂದ್ರವರದನ ಸನ್ನಿಧಿ ಆವರಣ ಹಾಗೂ ಬಳೆಮಂಟಪಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ದೇವಾಲಯದ ಇತಿಹಾಸ ಬಿಂಬಿಸುವ ಲೇಸರ್‌ ಷೂ ಭಕ್ತರ ಗಮನ ಸೆಳೆಯಿತು. ಇವೆಂಟ್‌ಮಾದರಿಯ ಕಾರ್ಯಕ್ರಮಗಳನ್ನು ಈ ಸಲವೂ ರದ್ದು ಮಾಡಿದ್ದ ಮಂಡ್ಯ ಜಿಲ್ಲಾಡಳಿತ ಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ ವೈಭವವನ್ನು ಕಣ್ತುಂಬಿಕ್ಕೊಳ್ಳಲು ಭಕ್ತರಿಗೆ ಅವಕಾಶ ಮಾಡಿತ್ತು.

ಸ್ಥಾನೀಕರು, ಅರ್ಚಕರು, ಭಕ್ತರ ಸಲಹೆಗೆ ಮನ್ನಣೆ ನೀಡಿದ ಜಿಲ್ಲಾಧಿಕಾರಿ ಮತ್ತು ಅಪರಜಿಲ್ಲಾಧಿಕಾರಿಗಳು ಸಂಪ್ರದಾಯಬದ್ಧ ಉತ್ಸವಗಳ ನಡುವೆ ಅನಗತ್ಯ ಕಾರ್ಯಕ್ರಮಗಳ ಸೇರ್ಪಡೆ ಮಾಡದೆ ತೆಪ್ಪೋತ್ಸವ ನಡೆಸುವುದಾಗಿ ತಿಳಿಸಿದಂತೆ ತೆಪ್ಪೋತ್ಸವ ನಡೆಸಲಾಯಿತು. ತೆಪ್ಪೋತ್ಸವ ನಂತರ ರಾತ್ರಿ ಡೋಲೋತ್ಸವ, ಕುದುರೆವಾಹನೋತ್ಸವ, ಕಳ್ಳಸುಲಿಗೆ ಉತ್ಸವ ನೆರವೇರಿತು. ಮಾ.26ರ ಬೆಳಗ್ಗೆ 8 ಗಂಟೆಗೆ ಸಂಧಾನಸೇವೆ ನಡೆಯಲಿದೆ. ಇಂದು ತೀರ್ಥಸ್ನಾನ ಪಟ್ಟಾಭಿಷೇಕ

ಮೇಲುಕೋಟೆ:ಶ್ರೀಚೆಲುವನಾರಾಯಣಸ್ವಾಮಿ ಜಯಂತಿ ಪ್ರಯುಕ್ತ ಮಾ.26ರ ಮಂಗಳವಾರ ಕಲ್ಯಾಣಿಯಲ್ಲಿ 10 ಗಂಟೆಗೆ ತೀರ್ಥಸ್ನಾನ ಹಾಗೂ ಸಂಜೆ ಚೂರ್ಣಾಭಿಷೇಕ, ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ.ನಂತರ ಪುಷ್ಪಾಲಂಕೃತ ಸಮರಭೂಪಾಲವಾಹನೋತ್ಸವ ನಡೆಯಲಿದೆ. ನಂತರ ಪಡಿಮಾಲೆ-ಪೂರ್ಣಾಹುತಿ ನಡೆಯಲಿದೆ. ವೈರಮುಡಿ ಬ್ರಹ್ಮೋತ್ಸವದ ಯಶಸ್ಸಿಗೆ ಕೈಂಕರ್ಯ ಮಾಡಿದ ಸ್ಥಾನೀಕರಿಗೆ ರಾಮಾನುಜರ ಕಾಲದಿಂದ ನಡೆದುಕೊಂಡು ಬಂದಿರುವ ಅನೂಚಾನ ಸಂಪ್ರದಾಯದಂತೆ ಮಾಲೆ ಮರ್ಯಾದೆ ನಡೆಯಲಿದೆ.ತಂಗಳನ್ನದ ಮಂಟಪಕ್ಕೆ ಉತ್ಸವದ ವಿಶೇಷ:ಚೆಲುವನಾರಾಯಣನ ಪರಮಭಕ್ತೆಯಾದ ವೃದ್ಧ ಮಹಿಳೆಯೊಬ್ಬರು ಬೆಟ್ಟದಹಿಂಭಾಗ ಬಂದಾಗ ಆಯಾಸಗೊಂಡು ಮಲಗಿದ್ದಳಂತೆ ದೇವರ ದರ್ಶನ ಮಾಡದೆ ಅನ್ನ ಸ್ವೀಕಾರ ಮಾಡುವುದಿಲ್ಲ ಎಂಬ ವ್ರತ ಮಾಡಿದ್ದ ಮುದುಕಿಗೆ ಕೊನೆಗೂ ದರ್ಶನ ಮಾಡಲು ಸಾಧ್ಯವೇ ಆಗುವುದಿಲ್ಲ. ಆಕೆ ತಂದ ಮೊಸರನ್ನ ಸಹ ಹಳಸಿಹೋಗಿತ್ತು.ಸಾಕ್ಷಾತ್ ಚೆಲುವನಾರಾಯಣನೇ ಮುದುಕಿಯ ಬಳಿ ದರ್ಶನ ನೀಡಿ ವೃದ್ಧೆಯಬಳಿ ಇದ್ದ ಹಳಸಿದ ಮೊಸರನ್ನ ಸ್ವೀಕರಿಸಿ ಅವಳಿಗೂ ತಿನ್ನಿಸಿದ ಎಂಬ ಐತಿಹ್ಯದ ಹಿನ್ನೆಲೆಯೊಂದಿಗೆ ಮಂಟಪ ನಿರ್ಮಾಣವಾಗಿದ್ದು, ಇಂದಿಗೂ ತೀರ್ಥಸ್ನಾನದ ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ತಂಗಳನ್ನದ ಮಂಟಪಕ್ಕೆ ಚೆಲುವನಾರಾಯಣ ಉತ್ಸವ ನಡೆಯುತ್ತಿದೆ. ಮಂಗಳವಾರ ಬೆಳಗ್ಗೆ ಮಂಟಪಕ್ಕೆ ರಾಜಮುಡಿಯೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ.