ಶ್ರೀ ಆಂಜನೇಯಸ್ವಾಮಿ ಕಾರ್ತಿಕ ದೀಪೋತ್ಸವ 15ರಂದು

| Published : Nov 13 2025, 12:05 AM IST

ಶ್ರೀ ಆಂಜನೇಯಸ್ವಾಮಿ ಕಾರ್ತಿಕ ದೀಪೋತ್ಸವ 15ರಂದು
Share this Article
  • FB
  • TW
  • Linkdin
  • Email

ಸಾರಾಂಶ

ತಿಪಟೂರು: ತಾಲೂಕಿನ ರಂಗಾಪುರದ ಹೊಸಹಳ್ಳಿ ರಾಯರ ತೋಟದ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ಆಂಜನೇಯ ಸ್ವಾಮಿಯವರ ಕಾರ್ತಿಕ ದೀಪೋತ್ಸವ ನ.15ರಂದು ಶನಿವಾರ ನಡೆಯಲಿದೆ

ತಿಪಟೂರು: ತಾಲೂಕಿನ ರಂಗಾಪುರದ ಹೊಸಹಳ್ಳಿ ರಾಯರ ತೋಟದ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ಆಂಜನೇಯ ಸ್ವಾಮಿಯವರ ಕಾರ್ತಿಕ ದೀಪೋತ್ಸವ ನ.15ರಂದು ಶನಿವಾರ ನಡೆಯಲಿದೆ ಎಂದು ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಧರ್ಮದರ್ಶಿ ಮಂಜುನಾಥ್ ತಿಳಿಸಿದರು. ತಾಲೂಕಿನ ಹೊಸಹಳ್ಳಿ ರಾಯರ ತೋಟದ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ತಿಕ ದೀಪೋತ್ಸವ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಹಾಗೂ ಗಾಣಿಗರ ಮಹಾಸಂಸ್ಥಾನ ತೈಲೇಶ್ವರ ಮಠದ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ನಡೆಯಲಿದ್ದು, ಅಂದು ಶ್ರೀ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಗಂಗಸ್ನಾನ, ಸಂಜೆ 101 ಎಡೆ ಸೇವೆ, ಕಾರ್ತಿಕೋತ್ಸವ, ದೀಪಾರಾಧನೆ ನಡೆಯಲಿದೆ. ನಂತರ ಸ್ವಾಮಿಯ ಸನ್ನಿಧಾನದಿಂದ ರಂಗಾಪುರದ ರಾಜ ಬೀದಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಆಂಜನೇಯ ಸ್ವಾಮಿ ಮತ್ತು ಕೆರೆಗೋಡಿ ದ್ಯಾವಮ್ಮ ದೇವಿ ಉತ್ಸವ ನಡೆಯಲಿದೆ. ರಾತ್ರಿ ಕೆಂಡದ ಸೇವೆ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಮಂಡ್ಯ ಜಿಲ್ಲೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯರಹಳ್ಳಿ ಪುಟ್ಟಸ್ವಾಮಿ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು , ಮದ್ದಿನ ಪ್ರದರ್ಶನ ಏರ್ಪಡಿಸಲಾಗಿದೆ. ನ.16ರಂದು ಮಣೆವು ಸೇವೆ ನಡೆಯಲಿದ್ದು ರಂಗಾಪುರ, ಹೊಸಹಳ್ಳಿ, ಕೆರೆಗೋಡಿ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಕಾರ್ಯದರ್ಶಿ ಪ್ರಕಾಶ್, ಗೋವಿಂದಘಟ್ಟದ ಗಂಗಾಧರ್, ಚಿಕ್ಕನಾಯಕನಹಳ್ಳಿ ನಿಂಗಯ್ಯ, ಪತಂಜಲಿ ಯೋಗ ಕೇಂದ್ರದ ಮಂಜುನಾಥ್, ಶಿವರಾಜು ಮತ್ತಿತರರಿದ್ದರು.