ಮನುಷ್ಯನ ಏಳ್ಗೆಗೆ ಶ್ರೀಭಗವದ್ಗೀತೆ ಸಹಕಾರಿ

| Published : Nov 05 2024, 01:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಭಗವದ್ಗೀತೆ ಮನುಷ್ಯನ ಏಳಿಗೆಗೆ ಸಹಕಾರಿಯಾಗಿದ್ದು, ಸಂಸ್ಕೃತಿ, ಸಂಸ್ಕಾರವನ್ನು ಕಲಿಸುತ್ತದೆ ಎಂದು ಶಿರಸಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹೇಳಿದರು

ಕನ್ನಡಪ್ರಭ ವಾರ್ತೆ ವಿಜಯಪುರ

ಭಗವದ್ಗೀತೆ ಮನುಷ್ಯನ ಏಳಿಗೆಗೆ ಸಹಕಾರಿಯಾಗಿದ್ದು, ಸಂಸ್ಕೃತಿ, ಸಂಸ್ಕಾರವನ್ನು ಕಲಿಸುತ್ತದೆ ಎಂದು ಶಿರಸಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹೇಳಿದರು.

ಸಮಾಜದಲ್ಲಿ ಶ್ರೀ ಭಗವದ್ಗೀತಾ ಜಾಗೃತಿ ಮೂಡಿಸುವ ಸಲುವಾಗಿ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿಯಿಂದ ನಗರದ ಪಿಡಿಜೆ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿರುವ ವಿಜಯಪುರ ಜಿಲ್ಲಾ ಶ್ರೀ ಭಗವದ್ಗೀತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಭಗವದ್ಗೀತಾ ಅಭಿಯಾನವೂ ಮುಖ್ಯವಾಗಿ ನಾಲ್ಕು ವಿಚಾರಗಳ ಜ್ಞಾನಕ್ಕಾಗಿ ನಡೆಯುತ್ತಿದೆ. ಮೊದಲನೇಯದಾಗಿ ವ್ಯಕ್ತಿತ್ವ ವಿಕಸನಕ್ಕಾಗಿ ಅಭಿಯಾನ ನಡೆಸಲಾಗುತ್ತಿದೆ. ಮನುಷ್ಯನ ವಕ್ತಿತ್ವ ಸಂಪೂರ್ಣವಾಗಿ ಹಾಳಾಗಿದೆ. ಮಧುಮೇಹ, ರಕ್ತದ ಒತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಗೆ ಮಾನಸಿಕ ಒತ್ತಡ ಕಾರಣವಾಗಿದೆ ಎಂದರು.ಮಾನಸಿಕ ಒತ್ತಡಕ್ಕೆ ಮನುಷ್ಯ ಸಿಲುಕಿರುವುದು ಕಂಡುಬರುತ್ತದೆ. ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಪರೀಕ್ಷೆಗಳ ನಂತರ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದು ಆತ್ಮಹತ್ಯೆಗಳು ಜರುಗುತ್ತಿವೆ. ಇದು ಮನುಷ್ಯನ ಮಾನಸಿಕ ಸ್ಥಿತಿ ಹದಗೆಟ್ಟಿರುವುದಕ್ಕೆ ಉದಾಹರಣೆ. ದೇಶದಲ್ಲೇ ಅತಿಹೆಚ್ಚು ಆತ್ಮಹತ್ಯೆಗಳು ಬೆಂಗಳೂರಿನಲ್ಲಿ ಆಗುತ್ತಿವೆ. ಇಂತಹ ಸಮಯದಲ್ಲಿ ಶ್ರೀ ಭಗವದ್ಗೀತೆ ಓದಿದರೆ ಮಾನಸಿಕ ಸ್ಥಿತಿ ಸಹಜ ಸ್ಥಿತಿಗೆ ಬರಲಿದೆ ಎಂದು ಹೇಳಿದರು.

ಎರಡನೇಯದ್ದು ನೈತಿಕತೆ ಪುನರುತ್ಥಾನಕ್ಕಾಗಿ ನಡೆಸಲಾಗುತ್ತಿದೆ. ನೈತಿಕತೆ ಅಧೋಗತಿಗೆ ತಲುಪಿದೆ. ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಹತ್ತು ವರ್ಷದ ಹಿಂದಿನ ಅಂಕಿಸಂಖ್ಯೆಯನ್ನು ನೋಡಿದರೆ ವರ್ಷಕ್ಕೆ ಒಂದು ಲಕ್ಷ ಮಹಿಳೆಯರು ಕಾಣೆಯಾಗುತ್ತಿದ್ದಾರೆ. ಮನುಷ್ಯ ಅಪರಾಧ ಪ್ರಕರಣಗಳಲ್ಲಿ ತೊಡಗದಂತೆ ಮಾಡಬೇಕಿದೆ. ಅದಕ್ಕೆ ಭಗವದ್ಗೀತೆ ಸಹಾಯವಾಗಲಿದೆ ಎಂದರು.

ಮೂರನೇಯದು ಸಾಮಾಜಿಕ ಸಾಮರಸ್ಯಕ್ಕಾಗಿ ಅಭಿಯಾನ ನಡೆಸುತ್ತಿದ್ದು, ಭಗವದ್ಗೀತೆಯಲ್ಲಿ ಎಲ್ಲ ಮತ ಸಿದ್ಧಾಂತಗಳಿಗೆ ಅವಕಾಶ‌ ಇದೆ. ಭಗವದ್ಗೀತೆ ಓದಿದರೆ ಎಲ್ಲರೂ ಸಮಾನರಾಗುತ್ತಾರೆ. ನಾಲ್ಕನೇಯದಾಗಿ ರಾಷ್ಟ್ರೀಯ ಭಾವೈಕ್ಯತೆಗಾಗಿ, ದೇಶದಲ್ಲಿ ಆತಂಕವಾದ ಹೆಚ್ಚಾಗಿದೆ. ಶಿಕ್ಷಣ ಪಡೆದವರು ಆತಂಕವಾದಿಗಳಾಗುತ್ತಿದ್ದಾರೆ. ಎಲ್ಲರೂ ಸುಶಿಕ್ಷಿತರಿದ್ದಾರೆ. ನಾವು ಪಡೆಯುವ ಶಿಕ್ಷಣದಲ್ಲಿ ಸಂಸ್ಕೃತಿ, ಆಧ್ಯಾತ್ಮಿಕತೆಯ ಕೊರತೆಯಿಂದಾಗಿ ಭಗವದ್ಗೀತೆ ಮೂಲಕ ಅದನ್ನು ತರಬೇಕಿದೆ ಎಂದು ತಿಳಿಸಿದರು.

ವಿಜಯಪುರ ಪವಿತ್ರ ಸ್ಥಳವಾಗಿದೆ. ಗಣಿತಕ್ಕೆ ಕೊಡುಗೆ ಕೊಟ್ಟ ಭಾಸ್ಕರಾಚಾರ್ಯರು ಹುಟ್ಟಿದ ನೆಲವಿದು. ಬಸವಣ್ಣನವರ ಜನ್ಮಭೂಮಿ ಇದು. ಈ ನೆಲದಿಂದಲೇ ಅಭಿಯಾನ ಶುರುವಾಗಿದೆ. ಈ ಅಭಿಯಾನ ಡಿ.14ರಂದು ಇಲ್ಲಿಯೇ ಸಮಾರೋಪ ಸಮಾರಂಭ ನಡೆಯಲಿದೆ. ನಿರಂತರವಾಗಿ ಒಂದು ಸಾವಿರ ಉಪನ್ಯಾಸಗಳು ನಡೆಯಲಿವೆ. ಜಿಲ್ಲಾದ್ಯಂತ ಭಗವದ್ಗೀತೆ ವಿತರಣೆ ಮಾಡಲಾಗುತ್ತಿದೆ. ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಸ್ಪರ್ಧೆಗಳು ಸಹ ನಡೆಯಲಿವೆ. ಡಿ.11 ಭಗವದ್ಗೀತಾ ಜಯಂತಿ ಆಚರಣೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿ, ಭಗವದ್ಗೀತೆಯ ಮಹತ್ವ ಅರಿಯುವುದು ಮುಖ್ಯವಾಗಿದೆ. ಜಾಗೃತಿ ಮೂಡಿಸಲು ಪೂಜ್ಯರು 14 ವರ್ಷಗಳಿಂದ ಈ ಅಭಿಯಾನ ಮಾಡುತ್ತಿದ್ದಾರೆ. ಭಗವದ್ಗೀತೆ 5 ಸಾವಿರ ವರ್ಷಗಳ ಹಿಂದಿನ ಭಾರತದ ಪವಿತ್ರ ಗ್ರಂಥ. ಮನುಷ್ಯ ತೊಂದರೆಗೊಳಗಾದಾಗ, ಜಿಗುಪ್ಸೆಗೆ ಒಳಗಾದಾಗ ಸಂಜೀವಿನಿ ಕಡ್ಡಿಯಂತೆ ಬರುವುದು ಈ ಭಗವದ್ಗೀತೆ ಎಂದು ಹೇಳಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ವಿಜಯಪುರ ಬಸವಣ್ಣನವರ ನಾಡು, ಶ್ರೀ ಸಿದ್ಧೇಶ್ವರ ಸ್ವಾಮೀಜಿ ನಡೆದಾಡಿದ ಬೀಡು. ಇಂತಹ ಸ್ಥಳದಲ್ಲಿ ಅಭಿಯಾನ ನಡೆದಿದ್ದು ಅತ್ಯಂತ ಸೂಕ್ತವಾಗಿದೆ. 14 ವರ್ಷಗಳಿಂದ ಸ್ವಾಮೀಜಿಗಳು ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ. ಇದುವರೆಗೂ 50 ಲಕ್ಷಕ್ಕೂ ಅಧಿಕ ಭಗವದ್ಗೀತೆ ಪ್ರತಿಗಳನ್ನು ಮನೆಮನೆಗೆ ತಲುಪಿಸಿ, ಲಕ್ಷ ಲಕ್ಷ ಮಕ್ಕಳಿಗೆ ಅರಿವು ಮೂಡಿಸಿದ್ದಾರೆ. ಡಿ.14 ರಂದು ದೊಡ್ಡಮಟ್ಟದಲ್ಲಿ ಸಮಾರೋಪ ನಡೆಯಲಿದೆ. ಸಂಸ್ಕಾರ, ಸಂಸ್ಕೃತಿ, ಶಿಕ್ಷಣವಂತರು ಇದಕ್ಕೆ ಒತ್ತುಕೊಟ್ಟು ಸನಾತನ ಧರ್ಮದ ಉಳಿವಿಗೆ ಕೆಲಸ ಮಾಡಬೇಕಿದೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಶ್ರೀಗಳು ತಮ್ಮ ಮಠಕ್ಕೆ ಸೀಮಿತವಾಗದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂದೇಶ ಸಾರುವ ಕೆಲಸ ಮಾಡುತ್ತಿದ್ದಾರೆ. ಭಗವದ್ಗೀತೆ ಅಭಿಯಾನ ನಮ್ಮೆಲ್ಲರ ಮಾನಸಿಕ ಸಮಸ್ಯೆಗೆ ಉತ್ತರ ಕೊಡುವ ಕೆಲಸ ಮಾಡುತ್ತಿದ್ದಾರೆ. ಅರ್ಜುನನಂಥಹ ಮಹಾ ಸಾರಥಿಗೆ ಗೊಂದಲ‌ ಉಂಟಾದಾಗ ಮಾರ್ಗದರ್ಶನ ಕೊಟ್ಟಿದ್ದು ಭಗವದ್ಗೀತೆಯ ಶ್ಲೋಕಗಳು. ಪ್ರಪಂಚದಾದ್ಯಂತ ಮಾನಸಿಕ ರೋಗಿಗಳಿಗೆ ಈ ಶ್ಲೋಕ ಹೇಳುವ ಮೂಲಕ ಗುಣಪಡಿಸುವ ಕೆಲಸ ನಡೆಯುತ್ತಿದೆ‌. ಮಕ್ಕಳೆಲ್ಲ ಭಗವದ್ಗೀತೆಯ ಶ್ಲೋಕಗಳನ್ನು ಕಂಠಪಾಠ ಮಾಡಬೇಕು. ಮುಂದೆ ನಿಮಗೆ ಇದರ ಮಹತ್ವ ತಿಳಿಯುತ್ತದೆ. ಶ್ರೀಗಳ ಸಾಮಾಜಿಕ, ಧಾರ್ಮಿಕ, ಮಕ್ಕಳ‌ ಮೇಲಿನ ಕಾಳಜಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

ಶ್ರೀ ಭಗವದ್ಗೀತಾ ಅಭಿಯಾನದಲ್ಲಿ ಧ್ಯಾನಶ್ಲೋಕ, ಗೀತಾಪಠಣ, ಪುಷ್ಪಾರ್ಚನೆ, ಶ್ಲೋಕಪಠಣಗಳು ನಡೆದವು. ಸಂಸದ ರಮೇಶ ಜಿಗಜಿಣಗಿ, ಅರುಣ ಶಹಾಪುರ, ಉಮೇಶ ಕಾರಜೋಳ, ಮುಖಂಡರಾದ ಆರ್‌.ಎಸ್.ಪಾಟೀಲ್ ಕುಚಬಾಳ, ಅರುಣ ಸೋಲಾಪುರಕರ, ಶ್ರೀಹರಿ ಗೊಳಸಂಗಿ, ಸಂಗನಗೌಡ ಪಾಟೀಲ್, ಪಂಡಿತ್ ಮಧ್ವಾಚಾರ ಮೊಕಾಶಿ, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

------------

ಕೋಟ್‌

ದೇಶಾದ್ಯಂತ ಇಂದು ವಕ್ಫ್‌ ಮಾಡುತ್ತಿರುವ ಅನ್ಯಾಯದ ಬಗ್ಗೆ ರೈತರು ತಿರುಗಿ ಬಿದ್ದಿದ್ದಾರೆ. ನಿಮ್ಮ ವಕ್ಫ್ ವಿರುದ್ಧ ಹೋರಾಟಕ್ಕೆ ನಮ್ಮದೂ ನೈತಿಕ ಬೆಂಬಲ ಇದೆ. ಇದು ದುರಂತ. ವಕ್ಫ್‌ ಹೆಸರಿನಲ್ಲಿ ರೈತರಿಗೆ ಅನ್ಯಾಯ ಆಗಬಾರದು. ವಕ್ಫ್‌ ಘಟನೆಯಿಂದ ಅನೇಕರಿಗೆ ಅನ್ಯಾಯವಾಗಿದೆ, ಹೀಗಾಗಬಾರದಿತ್ತು.

- ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಶ್ರೀ, ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠ