ಆಷಾಢ ಮಾಸದ ಅಂಗವಾಗಿ ಶ್ರೀಚೆಲುವನಾರಾಯಣಸ್ವಾಮಿ ಉತ್ಸವ

| Published : Jun 29 2025, 01:33 AM IST

ಸಾರಾಂಶ

ಒಕ್ಕಲಿಗರ ಬೀದಿಯ ನೂತನ ಶ್ರೀರಾಮಮಂದಿರಕ್ಕೆ ಆಷಾಢ ಮಾಸದ ಅಂಗವಾಗಿ ಮಂಟಪ ಪ್ರತಿಷ್ಠೆ ಮಾಡಿಸಿ ಶ್ರೀ ಚೆಲುವನಾರಾಯಣಸ್ವಾಮಿ ಉತ್ಸವ ನೆರವೇರಿಸಲಾಯಿತು. ಆಚಾರ್ಯ ರಾಮಾನುಜರು ಹಾಗೂ ಶ್ರೀದೇವಿ ಭೂದೇವಿಯೊಂದಿಗೆ ನೆರವೇರಿದ ಉತ್ಸವಲ್ಲಿ ಸ್ವಾಮಿಗೆ ಇಡೀ ಒಕ್ಕಲಿಗ ಸಮುದಾಯ ಪಾಲ್ಗೊಂಡು ವಿಶೇಷ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಒಕ್ಕಲಿಗರ ಬೀದಿಯ ನೂತನ ಶ್ರೀರಾಮಮಂದಿರಕ್ಕೆ ಆಷಾಢ ಮಾಸದ ಅಂಗವಾಗಿ ಮಂಟಪ ಪ್ರತಿಷ್ಠೆ ಮಾಡಿಸಿ ಶ್ರೀ ಚೆಲುವನಾರಾಯಣಸ್ವಾಮಿ ಉತ್ಸವ ನೆರವೇರಿಸಲಾಯಿತು.

ಆಚಾರ್ಯ ರಾಮಾನುಜರು ಹಾಗೂ ಶ್ರೀದೇವಿಭೂದೇವಿಯೊಂದಿಗೆ ನೆರವೇರಿದ ಉತ್ಸವಲ್ಲಿ ಸ್ವಾಮಿಗೆ ಇಡೀ ಒಕ್ಕಲಿಗ ಸಮುದಾಯ ಪಾಲ್ಗೊಂಡು ವಿಶೇಷ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾದರು.

ಒಕ್ಕಲಿಗರ ಬೀದಿಯ ಶ್ರೀರಾಮಮಂದಿರಕ್ಕೆ ಅದಿದೈವ ಚೆಲುವನಾರಾಯಣಸ್ವಾಮಿಯವರ ಉತ್ಸವ ನೆರವೇರಬೇಕೆಂಬ ರೈತ ಸಮುದಾಯದವರ ನೂರಾರು ವರ್ಷಗಳ ಕನಸಿತ್ತಾದರೂ ಸಾಧ್ಯವಾಗಿರಲಿಲ್ಲ.

ಒಗ್ಗಟ್ಟಿನಿಂದ ದೇವರ ಉತ್ಸವ ನಡೆಸಲು ಪೂರಕವಾಗಿ ವಿಶಾಲವಾಗಿ ನಿರ್ಮಿಸಿದ್ಧ ರಾಮಮಂದಿರಕ್ಕೆ ಆಷಾಢ ಶುಕ್ರವಾರದಂದು ಮಂಟಪೋತ್ಸವ ನೆರವೇರುವ ಮೂಲಕ ರೈತ ಸಮುದಾಯದವರ ಕನಸು ನನಸಾದಂತಾಯಿತು.

ಚೆಲುವನಾರಾಯಣಸ್ವಾಮಿಯ ಉತ್ಸವ ಆಗಮನಕ್ಕೆ ಇಡೀ ಸಮುದಾಯ ಕಾತರ ಮತ್ತು ಸಂಭ್ರಮದಿಂದ ಕಾಯುತ್ತಿತ್ತು. ದೇವಾಲಯದಿಂದ ರಾಮಮಂದಿರದವರೆಗೆ ಇಡೀ ಬೀದಿಗಳನ್ನು ತಳಿರುತೋರಣ ರಂಗವಲ್ಲಿಗಳಿಂದ ಸಿಂಗಾರ ಮಾಡಲಾಗಿತ್ತು.

ಸಂಜೆ ವಿಶೇಷ ಮಂಗಳವಾದ್ಯದೊಂದಿಗೆ ನಡೆದ ಸ್ವಾಮಿಯ ಮೆರವಣಿಗೆಯ ವೇಳೆ ಪಟಾಕಿಗಳನ್ನು ಸಿಡಿಸಲಾಯಿತು. ಗೋವಿಂದ ನಾಮಸ್ಮರಣೆ ಮಾಡುತ್ತಾ ಇಡೀ ಸಮುದಾಯದ ಕುಟುಂಬದವರೆಲ್ಲರೂ ಚೆಲುವನಾರಾಯಣಸ್ವಾಮಿಗೆ ಹಣ್ಣುಕಾಯಿ ಅರ್ಪಿಸಿ ಪೂಜೆಮಾಡಿಸಿ ಪ್ರಸಾದ ಸ್ವೀಕರಿಸಿದ ನಂತರ ಸ್ವಾಮಿಯ ಉತ್ಸವ ದೇವಾಲಯಕ್ಕೆ ಮರಳಿತು.

ಇಡೀ ಒಕ್ಕಲಿಗ ಸಮುದಾಯ ಸೇರಿ ಭಕ್ತಿ ಪೂರ್ವಕವಾಗಿ ಹಮ್ಮಿಕ್ಕೊಂಡಿದ್ದ ಪ್ರಥಮ ಮಂಟಪೋತ್ಸವದಲ್ಲಿ ದೇವಾಲಯದ ಸ್ಥಾನೀಕರು, ಅರ್ಚಕರು, ಪರಿಚಾರಕರು ಕೈಂಕರ್ಯಪರರು, ರೈತಭವನ ಹಾಗೂ ರಾಮಮಂದಿರದ ಯಜಮಾನರು, ಯುವಕರು ಮಹಿಳೆಯರು ಭಾಗಿಯಾಗಿದ್ದರು.

ಇದಕ್ಕೂ ಮುನ್ನ ಬೆಳಗ್ಗೆ ರಾಮಮಂದಿರದಲ್ಲಿ ಮಂಟಪ ಪ್ರದಕ್ಷಿಣೆಗೆ ಹೂಮನೆರವೇರಿಸಿ ಸಾಂಪ್ರದಾಯಿಕವಾಗಿ ಮಂಟಪಪ್ರತಿಷ್ಠೆ ಮಾಡಿಸಲಾಯಿತು. ಸಂಜೆ ಒಕ್ಕಲಿಗ ಜನಾಂಗದ ಮುಖಂಡರು, ಯುವಕರು ಸೇರಿ ಸ್ವಾಮಿಗೆ ಅರ್ಪಿಸಲು ಸಿದ್ಧಮಾಡಿದ್ದ ಪುಷ್ಪಮಾಲೆಗಳ ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಶ್ವೇತಛತ್ರಿ ಮಂಗಳವಾದ್ಯದೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ಸಮರ್ಪಿಸಿದರು.