ಉಡುಪಿ: ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 20ನೇ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಏ. 29ರಿಂದ ಮೇ 2ರವರೆಗೆ ಪಂಚವಿಂಶತಿ ದ್ರವ್ಯಮೀಳಿತ ಅಷ್ಟೋತ್ತರ ಶತಬ್ರಹ್ಮಕುಂಭಾಭಿಷೇಕ, ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ವಸಂತ ಪೂಜೆ, ಪ್ರಸನ್ನ ಪೂಜೆ, ಶ್ರೀರಂಗ ಪೂಜೆ, ಶ್ರೀ ಚಂಡಿಕಾ ಯಾಗ ಹಾಗೂ ನಿರಂತರ ಮಹಾನ್ನ ಸಂತರ್ಪಣೆಯೊಂದಿಗೆ ನೆರವೇರಲಿದೆ.ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇಮೂ ಸರ್ವೇಶ ತಂತ್ರಿ, ವೇಮೂ ವಿಖ್ಯಾತ್ ಭಟ್ ಹಾಗೂ ಗಣೇಶ ಸರಳಾಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.ಏ. 28ರಂದು ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ತರಕಾರಿ ಮುಹೂರ್ತ, ಸಪ್ತಶುದ್ಧಿ, ಪ್ರಸಾದಶುದ್ದಿ, ವಾಸ್ತು ರಾಕ್ಷೋಘ್ನಾಧಿ ಪ್ರಕ್ರಿಯೆಗಳು ನಡೆಯಲಿವೆ.29ರಂದು ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯದಿ ಋತ್ವಿಕ್ ವರ್ಣ, ಸಪರಿವಾರ ದೇವರುಗಳಿಗೆ ನವಕಪ್ರಧಾನ ಅಧಿವಾಸ ಹೋಮ, ಕಲಶಾದಿವಾಸ, ಕಲಶಾಭಿಷೇಕ, ಪ್ರಸನ್ನ ಪೂಜೆ, 30ರಂದು ಶ್ರೀ ಗಾಯತ್ರಿ ಧ್ಯಾನಪೀಠದಲ್ಲಿ ಪಂಚಮುಖಿ ಗಾಯತ್ರಿ ದೇವಿಗೆ ಪಂಚವಿಂಶತಿ ಕಲಶಾಭಿಷೇಕ, ಶ್ರೀ ನಾಗದೇವರ ಪ್ರತಿಷ್ಠಾ ವರ್ಧಂತಿ, ಪಂಚವಿಂಶತಿ ಕಲಶಾರಾಧನೆ, ಸುಬ್ರಹ್ಮಣ್ಯಸ್ವಾಮಿಗೆ ಪವಮಾನಸೂಕ್ತ ಯಾಗ, ಕಲಶಾಭಿಷೇಕ, ಕಾಮದೇನು ಸಹಿತ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಪರಿವಾರ ದೇವರುಗಳಿಗೆ ಸ್ನಪನ ಕಲಶಾಭಿಷೇಕ, ಆಶ್ಲೇಷಬಲಿ, ದಾನ, ವಟು ಆರಾಧನೆ, ಪರಿವಾರ ಪೂಜೆ. ಪ್ರಸನ್ನಪೂಜೆ ಹಾಗೂ ಸಂಜೆ ಬ್ರಹ್ಮಕಲಶ ಮಂಡಲ ರಚನೆ, ಭುವನೇಶ್ವರಿ ಪೂಜೆ, ಬ್ರಹ್ಮಕಲಶಾದಿವಾಸ, ಅಧಿವಾಸ ಹೋಮಗಳು ನಡೆಯಲಿವೆ. ಮೇ 1ರಂದು ಸ್ವಸ್ತಿ ಪುಣ್ಯಾಹವಾಚನ, ಪಂಚಾಮೃತ ಅಭಿಷೇಕ, ಬೆಳಿಗ್ಗೆ 10.05ರ ಮಿಥುನ ಲಗ್ನ ಸುಮೂರ್ತದಲ್ಲಿ ಶ್ರೀ ಚಕ್ರಪೀಠ ಸುರಪೂಜಿತೆಗೆ ಪಂಚವಿಂಶತಿ ದ್ರವ್ಯಮೀಳಿತ ಅಷ್ಟೋತ್ತರಶತ ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ಮಹಾನ್ನಸಂತರ್ಪಣೆ, ಸಂಜೆ 6:30 ರಿಂದ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ವಸಂತ ಪೂಜೆ, ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆ, ರಂಗ ಪೂಜಾ ಮಹೋತ್ಸವ, ರಾತ್ರಿ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ, 2ರಂದು ಶ್ರೀ ಚಂಡಿಕಾಯಾಗ, ಮಹಾ ಸಂಪ್ರೋಕ್ಷಣೆ, ಬ್ರಾಹ್ಮಣ ಸುವಾಸಿನಿ ಆರಾಧನೆ, ಆಚಾರ್ಯ ದಂಪತಿ, ಕನ್ನಿಕಾ ಪೂಜೆ, ಶ್ರೀ ಮಹಾಮಂತ್ರಾಕ್ಷತೆ ಹಾಗೂ ಮಹಾನ್ನಸಂತರ್ಪಣೆಗಳು ಸಂಪನ್ನಗೊಳ್ಳಲಿದೆ.

ದಿನಂಪ್ರತಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದ್ದು, ಏ. 30ರ ಸಂಜೆ ಶಾರದಾ ನಾಟ್ಯಾಲಯ ಬೆಳಗಾವಿ ಕುಮಾರಿ ಶಾಂತಲಾ ಉದೋಷಿ ಹಾಗೂ ಶ್ರೇಯ ಉದೋಶಿ ಅವರಿಂದ ವಿಶೇಷ ಮನೋರಂಜನ ಕಾರ್ಯಕ್ರಮ ನೆರವೇರಲಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.