ಕಲಿಯುಗದ ಕಾಮಧೇನು ಎಂದೇ ಪ್ರಸಿದ್ಧರಾಗಿರುವ ಗುರು ರಾಘವೇಂದ್ರರು ನಂಬಿದ ಭಕ್ತರನ್ನು ಕೈಬಿಡುವುದಿಲ್ಲ. ಹಾಗಾಗಿ ಮಂತ್ರಾಲಯ ಇಂದು ಭಾರತದ ಪ್ರಮುಖ ಯಾತ್ರಾಕ್ಷೇತ್ರಗಳಲ್ಲಿ ಒಂದಾಗಿದೆ.
ಕನ್ನಡಪ್ರಭ ವಾರ್ತೆ ಸೊರಬ
ಕಲಿಯುಗದ ಕಾಮಧೇನು ಎಂದೇ ಪ್ರಸಿದ್ಧರಾಗಿರುವ ಗುರು ರಾಘವೇಂದ್ರರು ನಂಬಿದ ಭಕ್ತರನ್ನು ಕೈಬಿಡುವುದಿಲ್ಲ. ಹಾಗಾಗಿ ಮಂತ್ರಾಲಯ ಇಂದು ಭಾರತದ ಪ್ರಮುಖ ಯಾತ್ರಾಕ್ಷೇತ್ರಗಳಲ್ಲಿ ಒಂದಾಗಿದೆ. ರಾಯರನ್ನು ನೆನೆಯುವುದು, ಮಂತ್ರಾಲಯದತ್ತ ಹೆಜ್ಜೆ ಹಾಕುವುದು, ಬೃಂದಾವನದ ದರ್ಶನ ಪಡೆದು ಮನದಾಳದ ಪ್ರಾರ್ಥನೆ ಸಲ್ಲಿಸುವುದು ಇದು ಕೇವಲ ಧಾರ್ಮಿಕ ಆಚರಣೆಯಲ್ಲ. ಅನೇಕ ಭಕ್ತರ ಪಾಲಿಗೆ ಶತಮಾನಗಳಿಂದ ಮುಂದುವರಿದ ಆಧ್ಯಾತ್ಮಿಕ ನಂಟು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ತಾಲೂಕಿನ ಆನವಟ್ಟಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೫ನೇ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಗುರು ರಾಘವೇಂದ್ರರ ಮಠಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಜ್ಞಾನವನ್ನು ಹುಡುಕಿ, ಧರ್ಮವನ್ನು ಪಾಲಿಸಿ, ಭಕ್ತಿಯಲ್ಲಿ ಸ್ಥಿರವಾಗಿರಿ. ಗುರುವನ್ನು ಗೌರವಿಸಿ ಮತ್ತು ಸಂಕಷ್ಟದಲ್ಲಿಯೂ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ರಾಯರ ಜೀವನ ಹಾಗೂ ಪರಂಪರೆಯಿಂದ ಭಕ್ತರು ಪಡೆದುಕೊಳ್ಳುವ ಪ್ರಮುಖ ಸಂದೇಶಗಳಲ್ಲಿ ಇವು ಸೇರಿವೆ. ಇಂದಿನ ವೇಗದ ಬದುಕಿನಲ್ಲಿ ಮಾನಸಿಕ ನೆಮ್ಮದಿಗಾಗಿ ಮನುಷ್ಯ ಆಧ್ಯಾತ್ಮಿಕತೆಯತ್ತ ಮುಖ ಮಾಡುತ್ತಿರುವ ಸಂದರ್ಭದಲ್ಲಿ ರಾಯರ ಬೃಂದಾವನದ ಮುಂದೆ ಕಾಣುವ ಆ ಮೌನ ಭಕ್ತಿ ವಿಶೇಷ ಅರ್ಥ ಪಡೆದುಕೊಳ್ಳುತ್ತದೆ ಎಂದರು.ಭಕ್ತರ ಪಾಲಿಗೆ ರಾಯರು ಕಲಿಯುಗದ ಕಾಮಧೇನು, ಕಲಿಯುಗದ ಕಲ್ಪತರು ಎಂಬ ಬಿರುದುಗಳಿಂದ ಪ್ರಸಿದ್ಧರು. ಕಷ್ಟದಲ್ಲಿರುವವರಿಗೆ ಆಶ್ರಯ ನೀಡುವ ಗುರು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದಯಾಮಯ ಸಂತ ಎಂಬ ಭಾವನೆ ಈ ಹೆಸರುಗಳ ಹಿಂದೆ ಇದೆ ಎಂದ ಅವರು, ರಾಯರನ್ನು ಎಂದಿಗೂ ಸ್ಮರಿಸುವುದರಿಂದ ಚಿಂತೆ, ಮನಸ್ಸಿನ ದುಗುಡ ದುಮ್ಮಾನಗಳು ಮರೆಯಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಶಾಲು ಹೊದಿಸಿ, ಗೌರವಿಸಲಾಯಿತು.ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಚ್.ಇ. ಜ್ಞಾನೇಶ್, ಜಿ.ಪಂ. ಮಾಜಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಮಾಜಿ ಸದಸ್ಯ ಎ.ಎಲ್. ಅರವಿಂದ, ಮುಖಂಡರಾದ ಮಲ್ಲಿಕಾರ್ಜುನ ದ್ವಾರಹಳ್ಳಿ, ಉಮೇಶ್ ಉಡಗಣಿ ಸೇರಿದಂತೆ ಮೊದಲಾದವರು ಹಾಜರಿದ್ದರು.