ಸಾರಾಂಶ
ತಾಲೂಕಿನ ಮಾದಿಹಳ್ಳಿ ಗ್ರಾಮದ ಹುತ್ತು ಸಿದ್ಧೇಶ್ವರ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಮಾದಿಹಳ್ಳಿ ಗ್ರಾಮದ ಹುತ್ತು ಸಿದ್ಧೇಶ್ವರ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ ಪ್ರಾರಂಭವಾಗಿ ಸಂಜೆಯ ತನಕ ನಡೆಯುವ ಜಾತ್ರೆಗೆ ಮಾದಿಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರ ಜೊತೆಗೆ ಬೆಂಗಳೂರು, ತುಮಕೂರು ಜಿಲ್ಲೆ ಸೇರಿದಂತೆ ಅಕ್ಕ ಪಕ್ಕದ ತಾಲೂಕುಗಳಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದರು. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಪೂಜೆಯ ಕೈಂಕರ್ಯಗಳು ಸಾಂಪ್ರದಾಯಿಕವಾಗಿ ಜರುಗಿದವು. ಭಾನುವಾರ ಬೆಳಗ್ಗೆ 5.30 ರಿಂದ 7.30 ರ ವರೆಗೆ ಗಣಪತಿ ಸ್ಥಾಪನೆ, ಜ್ಯೋತಿ ಸ್ಥಾಪನೆ, ಧ್ವಜಾರೋಹಣ ಮಾಡಲಾಯಿತು. 9 ಗಂಟೆಯ ನಂತರ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಕರೆ ತರಲಾಯಿತು. ನಂತರ ಗಂಗಾಸ್ನಾನ, ಹೂವಿನ ಅಲಂಕಾರ ಮಾಡಿ ಅಷ್ಟೋತ್ತರ ಪೂಜೆ ನಡೆಸಿದರು. 10 ಗಂಟೆಯ ನಂತರ ಹರಕೆ ಹೊತ್ತ ಭಕ್ತರಿಂದ ಮುಡಿಸೇವೆ ನಡೆಯಿತು. ಮಧ್ಯಾಹ್ನ ಲಿಂಗಬೀರರ ಕುಣಿತ, ಸೋಮನ ಕುಣಿತ ನಡೆದವು. ದೇವಾಲಯದಲ್ಲಿ ಅರ್ಚಕರಿಲ್ಲದ ಕಾರಣ ಭಕ್ತಾದಿಗಳು ತಾವೇ ಪೂಜೆ ಮಾಡಿಕೊಳ್ಳುತ್ತಿದ್ದು ಕಂಡು ಬಂದಿತು. ದೇವರ ಪೂಜೆಗೆ ಬರುವ ಭಕ್ತಾದಿಗಳಿಗಾಗಿ ದೇವಾಲಯದ ಆವರಣದಿಂದ ಸುಮಾರು ಒಂದೆರೆಡು ಕಿಮೀ ದೂರದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಜಾತ್ರೆಗೆ ಬಂದ ಎಲ್ಲ ಭಕ್ತಾದಿಗಳಿಗೂ ಪಾನಕ ಮತ್ತು ಕೋಸಂಬರಿಯನ್ನು ವಿತರಿಸಲಾಯಿತು. ಭಾನುವಾರ ರಾತ್ರಿ ಹುತ್ತು ಸಿದ್ದೇಶ್ವರ ಕೃಪಾ ಪೋಷಿತ ನಾಟಕ ಮಂಡಲಿಯಿಂದ ಕೃಷ್ಣ ಸಂಧಾನ ಅಥವಾ ಧರ್ಮ ರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವೂ ಕೂಡ ಪ್ರದರ್ಶನಗೊಂಡು ಗ್ರಾಮಸ್ಥರಿಂದ ಮೆಚ್ಚು ಪಡೆಯಿತು.