ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿಶಿಷ್ಠತೆ ಹೊಂದಿರುವ ಶ್ರೀಕಾಲಭೈರವ ದೇವಾಲಯವನ್ನು ನಿರ್ಮಿಸಿದ ಕೀರ್ತಿ ಆದಿಚುಂಚನಗಿರಿ ಕ್ಷೇತ್ರದ ಭೈರವೈಕ್ಯ ಡಾ.ಬಾಲಗಂಗಾಧರ ನಾಥ ಶ್ರೀಗಳಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಸಿ.ಎಸ್ .ಪುಟ್ಟರಾಜು ಹೇಳಿದರು.ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಹರಿಹರೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ನೂತನ ಹರಿಹರೇಶ್ವರ ದೇವಾಲಯದ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ, ಕಲಶ ಸ್ಥಾಪನೆ ಮತ್ತು ದೇವಾಲಯ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ ಮಹಾರಾಜರು, ಪೂರ್ವಿಕರು ಶಿಲಾ ದೇಗುಲಗಳನ್ನು ನಿರ್ಮಿಸಿದ್ದರಿಂದ ಸಾವಿರಾರು ವರ್ಷಗಳು ಕಳದರೂ ಸದೃಢವಾಗಿವೆ. ದೇವಾಲಯ ನಿರ್ಮಿಸುವವರು ಶಿಲಾ ದೇಗುಲಗಳನ್ನೇ ನಿರ್ಮಿಸಬೇಕು. ಸಿಮೆಂಟ್ ಕಾಂಕ್ರಿಟ್ ನಿರ್ಮಿತ ದೇವಾಲಯಗಳಿಗೆ ಆಯಸ್ಸು ಕಡಿಮೆ. ಆದ್ದರಿಂದ ನಾವು ಮಾಡುವ ಕೆಲಸಗಳು ಪರಮಾತ್ಮನ ಪಾದಸ್ಪರ್ಶ ಮಾಡುವಂತಿರಬೇಕು ಎಂದು ಸಲಹೆ ನೀಡಿದರು.ದೇಗುಲದ ನಿರ್ಮಾಣದಿಂದ ಸಾಂಸ್ಕೃತಿಕ ಭಾರತವನ್ನು ನಿರ್ಮಿಸಲು ಸಾಧ್ಯ. ದೇವಾಲಯಗಳನ್ನು ನಿರ್ಮಿಸುವುದಕ್ಕೆ ಕೊಡುವುದಷ್ಟೇ ಪ್ರಾಮುಖ್ಯತೆಯನ್ನು ಅವುಗಳ ದೈನಂದಿನ ನಿರ್ವಹಣೆಗೂ ನೀಡಬೇಕು. ದಿನನಿತ್ಯದ ಪೂಜೆಗಳು ನಿಯಮಾನುಸಾರ ನಡೆದಾಗ ಮಾತ್ರ ಗ್ರಾಮಕ್ಕೆ ಶ್ರೇಯಸ್ಸು. ಪೂಜಾ ಕೈಂಕರ್ಯಗಳಿಗೆ ನೀಡುವಷ್ಟೇ ಆದ್ಯತೆಯನ್ನು ದೇವಾಲಯದ ಆವರಣದ ಸ್ವಚ್ಚತೆಗೂ ನೀಡಬೇಕು ಎಂದು ಕಿವಿಮಾತು ಹೇಳಿದರು. ಗ್ರಾಮಗಳಲ್ಲಿ ರಾಜಕೀಯ ಸಹಜ. ಆದರೆ, ಗ್ರಾಮಗಳ ಅಭಿವೃದ್ಧಿ, ಹಬ್ಬಗಳ ಸಮಯದಲ್ಲಿ ಎಲ್ಲರೂ ಒಗ್ಗೂಡಬೇಕು. ಹರಿಹರಪುರ ಗ್ರಾಮ ಕಳೆದ 75 ವರ್ಷಗಳ ಹಿಂದೆ ಸ್ಥಳಾಂತರಗೊಂಡ ಗ್ರಾಮವಾಗಿದೆ. ಹಳೆಯ ಹರಿಹರಪುರದಲ್ಲಿ ಹೊಯ್ಸಳ ನಿರ್ಮಿತ ಹರಿಹರೇಶ್ವರ ದೇವಾಲಯವಿದೆ. ಹೊಸ ದೇವಾಲಯ ನಿರ್ಮಿಸಿದ ಮಾತ್ರಕ್ಕೆ ಹಳೆಯ ದೇವಾಲಯವನ್ನು ನಿರ್ಲಕ್ಷಿಸಬೇಡಿ ಎಂದರು.ಹಳೆಯ ದೇವಾಲಯದ ಜೀರ್ಣೋದ್ದಾರಕ್ಕೂ ಶ್ರಮಿಸಬೇಕು. ಹಳೆಯ ದೇವಾಲಯದಲ್ಲಿಯೂ ಹರಿಹರೇಶ್ವರನಿಗೆ ನಿತ್ಯ ಪೂಜೆ ನಡೆಯುವಂತಾಗಲಿ. ಕ್ಷೇತ್ರದಲ್ಲಿ ಅತ್ಯುತ್ತಮ ಶಾಸಕರಿದ್ದಾರೆ. ದೇವಾಲಯ ಅಭಿವೃದಿಗೆ ಶಾಸಕರ ಸಹಕಾರವನ್ನೂ ಪಡೆದುಕೊಳ್ಳಿ. ಶಾಸಕರ ಜೊತೆ ಸೇರಿ ನಾನು ನನ್ನ ಕೈಲಾದ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು. ಹೇಮಗಿರಿಯಲ್ಲಿ ನಾನು ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಹರಿಹರಪುರ ಗ್ರಾಮಕ್ಕೆ ಟೆಂಟ್ ಸಿನಿಮಾ ನೋಡಲು ಬರುತ್ತಿದ್ದೆ ಎಂದು ತಮ್ಮ ಹಿಂದಿನ ದಿನಗಳನ್ನು ಸ್ಮರಿಸಿದರು. ಹರಿಹರಪುರ ಗ್ರಾಮದ ಅಭಿವೃದ್ಧಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೊಡುಗೆ ಅಪಾರವಾಗಿದೆ. ಗ್ರಾಮದ ಹೈಸ್ಕೂಲ್ ಉದ್ಘಾಟಿಸಿದವರು ದೇವೇಗೌಡರು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಟಿ.ಮಂಜು ಮಾತನಾಡಿ, ಕೆ.ಆರ್.ಪೇಟೆ ತಾಲೂಕು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಹರಿಹರಪುರದ ಆಂಜನೇಯ ಸ್ವಾಮಿ ರಥೋತ್ಸವದಿಂದ ಹಿಡಿದು ಅಕ್ಕಿಹೆಬ್ಬಾಳು, ಹೇಮಗಿರಿ, ಹೊಸಹೊಳಲು, ಗವಿರಂಗನಾಥ, ಗವೀಮಠ, ಮಡುವಿನಕೋಡಿ ಸೇರಿದಂತೆ ಹಲವಾರು ಗ್ರಾಮಗಳಲಿ ರಥೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.ಹೊಸಹೊಳಲು, ಗೋವಿಂದನಹಳ್ಳಿ, ಸಿಂಧಘಟ್ಟ, ಅಗ್ರಹಾರಬಾಚಹಳ್ಳಿ, ಬಸದಿ, ಭೂ ವರಾಹನಾಥ, ಕಿಕ್ಕೇರಿ, ಅಘಲಯ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಶಿಲ್ಪಕಲಾ ವೈಭವನ್ನು ಮೇಳೈಸಿಕೊಂಡಿರುವ ಐತಿಹಾಸಿಕ ಪುರಾತನ ದೇವಾಲಯಗಳಿವೆ ಎಂದು ತಿಳಿಸಿದರು.ಹರಿಹರಪುರ ಪಾಳೇಗಾರರು ಕಟ್ಟಿ ಆಳಿದ ಭೂಮಿ. ಈ ಗ್ರಾಮದ ಬಗ್ಗೆ ನನಗೆ ವಿಶೇಷ ಪ್ರೀತಿಯಿದೆ. ರಾಜ್ಯದಲ್ಲಿ ನಮ್ಮ ಸರ್ಕಾರವಿಲ್ಲ. ನಾನು ವಿಪಕ್ಷ ಶಾಸಕನಾಗಿದ್ದರೂ ಅಭಿವೃದ್ದಿಯ ವಿಚಾರದಲ್ಲಿ ಎದೆಗುಂದುವುದಿಲ್ಲ. ಹೋರಾಟದ ನೆಲಗಟ್ಟಿನಲ್ಲಿ ಬಂದವನು. ಅಭಿವೃದ್ದಿಗಾಗಿ ಅಗತ್ಯ ಹೋರಾಟ ಮಾಡುತ್ತೇನೆ ಎಂದರು.ಜನರ ಸಹಕಾರದಿಂದ ಶಾಸಕನ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿರ್ವಹಿಸಿ ಕ್ಷೇತ್ರದ ಜನರಿಗೆ ಗೌರವ ತರುತ್ತೇನೆ. ಸ್ಥಳಾಂತರ ಗ್ರಾಮ ಹರಿಹರಪುರದಲ್ಲಿ ಇ-ಸ್ವತ್ತು, ಸ್ಮಶಾನ ಮತ್ತಿತರ ಸಮಸ್ಯೆಗಳಿವೆ. ಇವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.ಸಮಾರಂಭದಲ್ಲಿ ಮನ್‌ಮುಲ್ ಡಾಲು ರವಿ, ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಗ್ರಾಪಂ ಅಧ್ಯಕ್ಷೆ ಸುಂದರಮ್ಮ ಮಂಜೇಗೌಡ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ವಡ್ಡರಹಳ್ಳಿ ಧನಂಜಯ, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಬಲದೇವ್, ಬೊಮ್ಮೇನಹಳ್ಳಿ ಮಂಜುನಾಥ್, ಜೆಡಿಎಸ್ ಮುಖಂಡರಾದ ಮಾಕವಳ್ಳಿ ವಸಂತಕುಮಾರ್, ಅಕ್ಕಿಹೆಬ್ಬಾಳು ಬಸವಲಿಂಗಪ್ಪ, ಜೈನಹಳ್ಳಿ ಲಯನ್ ದಿನೇಶ್, ಬೆಳತೂರು ಪುಟ್ಟೇಗೌಡ, ಮಾಂಬಳ್ಳಿ ಅಶೋಕ್, ಮುಖಂಡರಾದ ರಾಮಕೃಷ್ಣೇಗೌಡ,ಹೆಚ್.ಎಸ್.ರಾಮೇಗೌಡ, ಹೆಚ್.ವಿ.ಗಣೇಶ್, ಮಹದೇವೇಗೌಡ, ಕುರ್ನೇನಹಳ್ಳಿ ಬಲರಾಮೇಗೌಡ, ದಲಿತ ಮುಖಂಡ ನರಸಿಂಹ, ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ, ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಸೇರಿದಂತೆ ದೇವಾಲಯ ಸಮಿತಿಯ ಟ್ರಸ್ಟಿಗಳು ಉಪಸ್ಥಿತರಿದ್ದರು.