ಸಾರಾಂಶ
- ಉಜ್ಜಯಿನಿ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಮಹಿಳೆಯರೇ ರಥ ಎಳೆಯುವ ಮೂಲಕ ಭಕ್ತಿ ಸಮರ್ಪಿಸುವ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಹೂವಿನ ರಥೋತ್ಸವ ನಗರದ ಹೊರವಲಯದ ಯರಗುಂಟೆ ಗ್ರಾಮದಲ್ಲಿ ಶನಿವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.ಯರಗುಂಟೆಯಲ್ಲಿ ಸರ್ವರಿಗೂ ಸಮಾನತೆ ನೀಡುವ ಮಹಾನ್ ಶರಣ ಬಸವಣ್ಣನವರ ಪರಿಕಲ್ಪನೆಯಂತೆ ಪ್ರತಿವರ್ಷ ರಥೋತ್ಸವದಲ್ಲಿ ಮಹಿಳೆಯರೇ ಶ್ರೀ ಅಜ್ಜಯ್ಯನ ಹೂವಿನ ರಥ ಎಳೆಯುವ ಪರಂಪರೆ ಇಲ್ಲಿ ಕೆಲವು ವರ್ಷಗಳಿಂದ ನಡೆದುಬಂದಿದೆ. ಈ ಸಲದ ರಥೋತ್ಸವದಲ್ಲಿ ತಾಯಂದಿರು, ಮಹಿಳೆಯರು, ವಿದ್ಯಾರ್ಥಿನಿ, ಯುವತಿಯರು ರಥ ಎಳೆದು, ಭಕ್ತಿ ಸಮರ್ಪಸಿದರು.
ರಥೋತ್ಸವಕ್ಕೆ ಮುನ್ನ ವೇದಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಉಜ್ಜಯಿನಿ ಶ್ರೀಕ್ಷೇತ್ರದ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲರನ್ನೂ ಒಂದು ಮಾಡಲು, ಒಗ್ಗೂಡಿಸಲು ಧಾರ್ಮಿಕ ಕಾರ್ಯಕ್ರಮಗಳು ಸರ್ವಕಾಲಕ್ಕೂ ಅತ್ಯಗತ್ಯವಾಗಿ ಬೇಕು. ಅಹಂಕಾರ ದೂರ ಮಾಡಿ, ನಾವೆಲ್ಲರೂ ಭಗವಂತನ ಮಕ್ಕಳು ಎಂಬ ಭಾವನೆ ಇಂಥ ಆಚರಣೆಗಳು ಮೂಡಿಸುತ್ತವೆ. ಶ್ರೀ ಗುರು ಕರಿಬಸವೇಶ್ವರರು ಭಕ್ತರು ಕೇಳಿದ್ದನ್ನೆಲ್ಲಾ ಕರುಣಿಸುವ, ಭಕ್ತರ ದುಃಖ, ದುಮ್ಮಾನ, ಚಿಂತೆಗಳನ್ನು ದೂರ ಮಾಡುವ ಶಕ್ತಿ ಹೊಂದಿದ್ದರು. ಒಂದೇ ದಿನಕ್ಕೆ ಯಾರೂ ಮಹಾತ್ಮರಾಗಲು ಸಾಧ್ಯವಿಲ್ಲ. ಎಲ್ಲವನ್ನೂ ತ್ಯಜಿಸಿ, ಮತ್ತೊಬ್ಬರಿಗಾಗಿ ಜೀವನ ಸವೆಸಿ, ಮತ್ತೊಬ್ಬರಿಗಾಗಿ ಜನ್ಮ ತಾಳಿ ಬಂದವರು ಮಹಾತ್ಮರಾಗುತ್ತಾರೆ ಎಂದರು.ಶ್ರೀಕ್ಷೇತ್ರ ಯರಗುಂಟೆಯ ಶ್ರೀ ಪರಮೇಶ್ವರ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಡಾ.ಬಸವ ಜಯಚಂದ್ರ ಸ್ವಾಮೀಜಿ, ಹೊಸಪೇಟೆಯ ಅನುರಾಧೇಶ್ವರಿ ಅಮ್ಮನವರು, ಉಜ್ಜಿನಿ ಸಜ್ಜಾದ್ ನಶೀನ್ ಹಜರತ್ ಸೈಯದ್ ರಹಮತ್ ವುಲ್ಲಾ, ಶಿರಾ ಸಜ್ಜಾದ್ ನಶೀನ್ ಹಜರತ್ ಸೈಯದ್ ಖಾದರ್ ಷಾ ಖಾದ್ರಿ, ಕಲ್ಲೂರು ಮಹಾಂತೇಶ್ ಶಾಸ್ತ್ರಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಎನ್.ಎಸ್. ರಾಜು ಇತರರು ಇದ್ದರು.
- - - -30ಕೆಡಿವಿಜಿ8: ದಾವಣಗೆರೆ ಹೊರವಲಯದಲ್ಲಿ ಶ್ರೀ ಕರಿಬಸವೇಶ್ವರ ಸ್ವಾಮೀಜಿ ಹೂವಿನ ರಥೋತ್ಸವ ಉಜ್ಜಯಿನಿ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಉದ್ಘಾಟನೆಗೊಂಡಿತು.-30ಕೆಡಿವಿಜಿ9, 10, 11:ದಾವಣಗೆರೆ ಹೊರವಲಯದಲ್ಲಿ ಶ್ರೀ ಕರಿಬಸವೇಶ್ವರ ಸ್ವಾಮಿಗಳ ಹೂವಿನ ರಥವನ್ನು ಎಳೆಯುತ್ತಿರುವ ತಾಯಂದಿರು, ಮಹಿಳೆಯರು, ಯುವತಿಯರು.