ಹಳೇನಗರದ ಡಾ. ಪುನೀತ್ ರಾಜಕುಮಾರ್ ರಸ್ತೆ(ತಾಲೂಕು ಕಚೇರಿ ರಸ್ತೆ)ಯ ಕಂಚಿನ ಬಾಗಿಲು ಶ್ರೀ ಕೋಟೆ ಆಂಜನೇಯ ಸ್ವಾಮಿ ಮಹಾ ರಥೋತ್ಸವ ಶನಿವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.

ಭದ್ರಾವತಿ: ಹಳೇನಗರದ ಡಾ. ಪುನೀತ್ ರಾಜಕುಮಾರ್ ರಸ್ತೆ(ತಾಲೂಕು ಕಚೇರಿ ರಸ್ತೆ)ಯ ಕಂಚಿನ ಬಾಗಿಲು ಶ್ರೀ ಕೋಟೆ ಆಂಜನೇಯ ಸ್ವಾಮಿ ಮಹಾ ರಥೋತ್ಸವ ಶನಿವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.

ಪ್ರತಿ ವರ್ಷದಂತೆ ಈ ಬಾರಿ ಸಹ ಮಧ್ಯಾಹ್ನ ೧೨.೩೦ ಸಮಯಕ್ಕೆ ಮಹಾ ರಥೋತ್ಸವದ ಧಾರ್ಮಿಕ ಆಚರಣೆಗಳು ಆರಂಭಗೊಂಡು ೧.೩೦ರ ಸುಮಾರಿಗೆ ಅಲಂಕೃತಗೊಂಡ ತೇರಿನಲ್ಲಿ ಶ್ರೀ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಭಕ್ತರು ಸ್ವಾಮಿಗೆ ಜಯಘೋಷಗಳನ್ನು ಹಾಕಿ ತೇರು ಎಳೆಯುವ ಮೂಲಕ ಭಕ್ತಿ ಮೆರೆದರು. ತೇರು ರಂಗಪ್ಪ ವೃತ್ತದವರೆಗೆ ಸಾಗಿ ಪುನಃ ಹಿಂದಿರುಗಿ ಕಂಚಿನಬಾಗಿಲುವರೆಗೂ ಸಾಗಿ ಪುನಃ ದೇವಸ್ಥಾನಕ್ಕೆ ಹಿಂದಿರುಗಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ಪವನ್ ಕುಮಾರ್ ಉಡುಪ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ನೆರವೇರಿದವು. ಹಳೇನಗರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ. ರಮಾಕಾಂತ ಹಾಗೂ ಇನ್ನಿತರ ದೇವಸ್ಥಾನಗಳ ಅರ್ಚಕರು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡಿದ್ದರು.

ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕೆ. ನರಸಿಂಹಮೂರ್ತಿ, ಪದಾಧಿಕಾರಿಗಳು ಹಾಗೂ ನಗರಸಭೆ ಸದಸ್ಯರಾದ ಬಿ.ಟಿ ನಾಗರಾಜ್, ಬಿ.ಎಂ ಮಂಜುನಾಥ್, ಕಾಂತರಾಜ್ ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಸೇವಾಕರ್ತರು ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು. ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.