ಇಲ್ಲಿನ ಹೊಸಕೊಪ್ಪ ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕೋಟೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಸಂಪೂರ್ಣಗೊಂಡಿದ್ದು, ಮೇ 11ರಿಂದ ಮೇ 15ರವರೆಗೆ ಅತ್ಯಂತ ವೈಭವದಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಇಲ್ಲಿನ ಹೊಸಕೊಪ್ಪ ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕೋಟೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಸಂಪೂರ್ಣಗೊಂಡಿದ್ದು, ಮೇ 11ರಿಂದ ಮೇ 15ರವರೆಗೆ ಅತ್ಯಂತ ವೈಭವದಿಂದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಈ ಭವ್ಯ ಮಹೋತ್ಸವವು ನಡೆಯುತ್ತಿದೆ. ಈ ಐದು ದಿನಗಳ ಕಾಲ ದೇವಸ್ಥಾನದಲ್ಲಿ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ, ಬ್ರಹ್ಮಕಲಶೋತ್ಸವ, ನೂತನ ಶಿಲಾಮಯ ಆಲಯ ಲೋಕಾರ್ಪಣೆ ಮತ್ತು ಕೃಷ್ಣಯಜುರ್ವೇದ ತೈತ್ತಿರೀಯ ಶಾಖಾ ಸಂಹಿತಾ ಸ್ವಾಹಾಕಾರ ಯಜ್ಞಗಳು ನಡೆಯಲಿವೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 11ರಂದು ದೇವತಾ ಪ್ರಾರ್ಥನೆ, ಶ್ರೀ ಗಣಪತಿ ಪೂಜೆ, ಪುಣ್ಯಾಹವಾಚನ, ಅಂಕುರಾರ್ಪಣ ಮತ್ತು ವಿವಿಧ ವಾಸ್ತು ಶಾಂತಿ ಹೋಮಗಳು ನಡೆಯಲಿವೆ.

ಮೇ 12ರಂದು ಗಣಪತಿ ಪೂಜೆ, ನವಗ್ರಹ ಹೋಮ, ಹಾಗೂ ಸಂಜೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮೇ 13ರಂದು ಪಂಚಗವ್ಯ ಹೋಮ, ಪ್ರಾಸಾದ ಶುದ್ಧಿ ಮತ್ತು ಸಂಜೆ ಭಜನಾ ಕಾರ್ಯಕ್ರಮಗಳು ಇರಲಿವೆ. ಮೇ 14ರಂದು ಶ್ರೀ ಕೋಟೇಶ್ವರ ದೇವರಿಗೆ ಮತ್ತು ಶ್ರೀ ದುರ್ಗಾದೇವಿ ಅಮ್ಮನವರಿಗೆ ಪುನಃ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶ ಅಭಿಷೇಕದ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಲಿವೆ.

ಮೇ 15ರಂದು ಮಹೋತ್ಸವದ ಸಮಾರೋಪ ದಿನದಂದು ಪೂರ್ಣಾಹುತಿ, ಮಹಾ ಅನ್ನಸಂತರ್ಪಣೆ ಮತ್ತು ರಾತ್ರಿ ಯಕ್ಷಗಾನ ಬಯಲಾಟ ಕಾರ್ಯಕ್ರಮ ಏರ್ಪಡಿಸಲಾಗಿದೆ.

ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು: ದಿನನಿತ್ಯ ಸಂಜೆ ವೇಳೆಯಲ್ಲಿ ಕಾಲ ಭೈರವೇಶ್ವರ ಭಜನಾ ತಂಡ, ಸಿಗಂದೂರೇಶ್ವರಿ ಕಲಾ ತಂಡ ಮತ್ತು ಹೊಸಕೊಪ್ಪ ಭಜನಾ ತಂಡಗಳಿಂದ ಭಜನೆ ಏರ್ಪಡಿಸಲಾಗಿದೆ. ಸುಗಮ ಸಂಗೀತ, ಭರತನಾಟ್ಯ ಮತ್ತು ಯಕ್ಷಗಾನ ಪ್ರದರ್ಶನಗಳು ಭಕ್ತಾದಿಗಳ ಮನರಂಜಿಸಲಿವೆ.

ಆಮಂತ್ರಣ: ಶ್ರೀ ಕೋಟೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಮತ್ತು ಗ್ರಾಮಸ್ಥರು ಈ ಪುಣ್ಯ ಕಾರ್ಯದಲ್ಲಿ ತನು-ಮನ-ಧನದಿಂದ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.

ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು ಹಾಗೂ ಶ್ರೀ ರೇಣುಕಾನಂದ ಮಹಾಸ್ವಾಮಿಗಳು ಗರ್ತಿಕೆರೆ ನಿಟ್ಟೂರು ಮಠದ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ವಿವಿಧ ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.