ಸಾರಾಂಶ
ಕಾಪು: ಇಲ್ಲಿನ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ನವರಾತ್ರೋತ್ಸವದ ಪ್ರಯುಕ್ತ ಸೋಮವಾರ ದಿಂದ ಅ. 1ರವರೆಗೆ ಜರುಗುವ ಹತ್ತು ದಿನಗಳ ಸರಣಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳಿಗೆ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ, ಅಧ್ಯಕ್ಷ ಕಿಶೋರ್ ಆಳ್ವ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಹವ್ಯಾಸಿ ಯಕ್ಷ ಕಲಾವಿದರು, ಕೊಂಕಣ ರೈಲ್ವೆಯ ನಿವೃತ್ತ ಅಧಿಕಾರಿ ರಘುನಾಥ್ ನಾಯಕ್ ಎಣ್ಣೆಹೊಳೆ ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಶರನ್ನವರಾತ್ರಿ ಗೌರವ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ವಹಿಸಿದ್ದರು. ಸೇವಾದಾರ ಬಿ.ಪುಂಡಲೀಕ ಮರಾಠೆ ಸ್ವಾಗತಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಶ್ರೀದುರ್ಗಾ ಮಹಿಳಾ ವೃಂದದ ಅಧ್ಯಕ್ಷೆ ವನಿತಾ ದೇವೇಂದ್ರ ಬೋರ್ಕಾರ್, ಶ್ರೀದುರ್ಗಾ ಚಂಡೆ ಬಳಗದ ಅಧ್ಯೆಕ್ಷೆ ಗೀತಾ ವಾಗ್ಲೆ, ಉಷಾ ಪಿ. ಮರಾಠೆ ಉಪಸ್ಥಿತರಿದ್ದರು.ರಾಜಾಪುರ ಸಾರಸ್ವತ ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಶ್ರೀರಾಮ್ ಪಿ.ಮರಾಠೆ ಪ್ರಾರ್ಥಿಸಿದರು. ಕ್ಷೇತ್ರದ ನಿಕಟಪೂರ್ವ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ವಂದಿಸಿದರು.
ಪ್ರಥಮ ದಿನದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಆದಿಶಕ್ತಿ ಮಹಾಲಕ್ಷ್ಮೀ ತೆಂಕುತಿಟ್ಟು ಯಕ್ಷಗಾನ ಮಂಡಳಿ ಲಕ್ಷ್ಮೀಪುರ ಇವರಿಂದ ‘ಕೊಲ್ಲೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡಿತು.