ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅದಿದೇವತೆ ಶ್ರೀಲಕ್ಷ್ಮಿಜನಾರ್ದನಸ್ವಾಮಿಯ ಬ್ರಹ್ಮರಥೋತ್ಸವ ಬುಧವಾರ ಭಕ್ತರ ಜಯಘೋಷದ ನಡುವೆ ಸಂಭ್ರಮ-ಸಡಗರದಿಂದ ನಡೆಯಿತು.ಕಳೆದ ಏ. ೩೦ರಿಂದ ಬ್ರಹ್ಮೋತ್ಸವದ ಕಾರ್ಯಕ್ರಮಗಳು ಆರಂಭವಾಗಿದ್ದು, ದೇವರಿಗೆ ಅಭಿಷೇಕ, ಮೃತ್ತಿಕಾ ಸಂಗ್ರಹಣ, ಪೂರ್ವಕ ಅಂಕುರಾರ್ಪಣ, ನಿತ್ಯ ಪೂಜೆ, ಹಂಸವಾಹನೋತ್ಸವ, ಶ್ರೀ ರಾಮಾನುಜಾಚಾರ್ಯ ತಿರುನಕ್ಷತ್ರ, ಶೇಷವಾಹನೋತ್ಸವ, ಮುಡಿ ಉತ್ಸವ, ಪ್ರಹ್ಲಾದ ಪರಿಪಾಲನೋತ್ಸವ, ಗರುಡೋತ್ಸವ ಗಜೇಂದ್ರ ಮೋಕ್ಷ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಲಾಯಿತು.
ಬೆಳಗ್ಗೆ ದೇವಾಲಯದ ಆವರಣದೊಳಗೆ ರಥವನ್ನು ಶೃಂಗರಿಸಿ ವಿಶೇಷ ಪೂಜೆ ನಡೆಸಲಾಯಿತು. ನಂತರ ಮಧ್ಯಾಹ್ನ ಸುಮಾರು ೧.೩೦ರ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಇದಕ್ಕೂ ಮುನ್ನ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಇತರರು ಹೊತ್ತು ತಂದರು. ನಂತರ ರಥದ ಮೇಲೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ನಂತರ ಭಕ್ತರ ಗೋವಿಂದ ನಾಮಸ್ಮರಣೆಯೊಂದಿಗೆ ರಥವನ್ನು ಎಳೆಯಲಾಯಿತು. ಸಹಸ್ರಾರು ಮಂದಿ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು. ಬಳಿಕ ದೇವಾಲಯದ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ರಾಜ್ಯ ಮುಖ್ಯ ಕಾರ್ಯದರ್ಶಿಯಿಂದ ಜಿಲ್ಲಾಧಿಕಾರಿಗೆ ಅಭಿನಂದನಾ ಪತ್ರ
ಕನ್ನಡಪ್ರಭ ವಾರ್ತೆ ಮಂಡ್ಯಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮ 2006 ಮತ್ತು ನಿಯಮ 2007ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಸರ್ವೋಚ್ಚ ನ್ಯಾಯಾಲಯವು WP.(S) (Civil) No: 109/2008 ದಿನಾಂಕ 28.02.2019 ರಲ್ಲಿ ನೀಡಿದ ಆದೇಶದಲ್ಲಿ ಸೂಚಿಸಿರುವಂತೆ ಜಿಲ್ಲೆಯಲ್ಲಿ ತಿರಸ್ಕರಿಸಲಾದ ಒಟ್ಟು 407 ಅರ್ಜಿಗಳ ಪೈಕಿ 407 ಅರ್ಜಿಗಳನ್ನು ಪುನರ್ ಪರಿಶೀಲನ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಪೂರ್ಣಗೊಳಿಸಿ ವರದಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಸಾಧಿಸಿರುವ ಪ್ರಗತಿಗೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಅರಣ್ಯ ಹಕ್ಕುಗಳ ಸಮಿತಿಗಳ ಕಾರ್ಯವನ್ನು ರಾಜ್ಯ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ರವರು ಶ್ಲಾಘಿಸುತ್ತಾ ಜಿಲ್ಲಾಧಿಕಾರಿ ಡಾ. ಕುಮಾರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.