ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಎಂಎನ್ ಕೋಟೆ ಗ್ರಾಮದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ನಡುವೆ ವೈಭವದಿಂದ ಜರುಗಿತು. ಆಷಾಢ ಮಾಸದಲ್ಲಿ ನಡೆಯುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಹೊಸದಾಗಿ ಮದುವೆಯಾದ ಜೋಡಿಗಳು ರಥೋತ್ಸವದಲ್ಲಿ ಭಾಗವಹಿಸುವುದು ವಿಶೇಷವಾಗಿತ್ತು. ಪ್ರತಿ ವರ್ಷವೂ ಕೂಡ ಏಕಾದಶಿ ಎಂದು ಬ್ರಹ್ಮರಥೋತ್ಸವ ನಡೆಯುತ್ತದೆ. ವಾಡಿಕೆಯಂತೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಸಾಗಸಂದ್ರ ಶ್ರೀ ಕೆಂಪಮ್ಮ ದೇವಿ ಹಾಗೂ ಎಂ.ಎನ್. ಕೋಟೆ ಶ್ರೀ ಕೊಲ್ಲಾಪುರದಮ್ಮ ದೇವರುಗಳ ಆಗಮನದೊಂದಿಗೆ ರಥೋತ್ಸವ ಪ್ರಾರಂಭವಾಯಿತು. ಏಕಾದಶಿ ಜಾತ್ರೆ ಶ್ರೀಲಕ್ಷ್ಮೀರಂಗನಾಥಸ್ವಾಮಿಗೆ ನಾಡಿನ ಭಕ್ತ ಸಾಗರವೇ ಸಾಕ್ಷಿ ಆಯಿತು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿದ್ದ ರಥೋತ್ಸವಕ್ಕೆ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯನ್ನು ಕೂರಿಸುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷೋದ್ಧಾರ ಮುಗಿಲುಮಟ್ಟಿತು. ಬ್ರಹ್ಮರಥೋತ್ಸವದಲ್ಲಿ ನಂದಿದ್ವಜ, ಚಂಡೇವಾದ್ಯ, ಬಸವನ ಉತ್ಸವ, ನಗಾರಿವಾದ್ಯ, ಚಿಟ್ಟೆ ಮೇಳ ರಥೋತ್ಸವಕ್ಕೆ ಮೆರಗು ನೀಡಿತು. ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸ ಎಳೆಯಲು ಭಕ್ತಾದಿಗಳು ನಾ ಮುಂದು ತಾ ಮುಂದು ಎಂದು ಮುಗಿ ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ರಥೋತ್ಸವದಲ್ಲಿ ಭಕ್ತಾದಿಗಳು ಜಯ ಘೋಷಗಳನ್ನು ಕೂಗುತ್ತಾ ರಥೋತ್ಸವವನ್ನು ಎಳೆದರು. ಭಕ್ತರು ರಥಕ್ಕೆ ಭಾಳೆಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ಭಕ್ತಾದಿಗಳಿಗೆ ಅಲ್ಲಲ್ಲಿ ಪಾನಕ ಫಲಹಾರವನ್ನು ವಿತರಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಮಿಸಿದ ಭಕ್ತರು ದೇವಾಲಯಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದರು. ರಥೋತ್ಸವಕ್ಕೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಭೇಟಿ ನೀಡಿ ದೇವರ ದರ್ಶನ ಪಡೆದರು.