ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಸಿಂಧಘಟ್ಟ ಗ್ರಾಮದಲ್ಲಿ ಶ್ರೀಲಕ್ಷ್ಮಿನಾರಾಯಣಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಸಿಂಧಘಟ್ಟ 27 ದೇವಾಲಯಗಳಿರುವ ದೊಡ್ಡ ಗ್ರಾಮ. ಈ ಗ್ರಾಮವನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ಧಿಗೊಳಿಸಬೇಕಿದೆ ಎಂದರು.
ಇಲ್ಲಿನ ದೇವಾಲಯಗಳಲ್ಲಿ ಐತಿಹಾಸಿಕ ಹಿನ್ನೆಲೆ ಸಾರುವ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಮಾಡಬೇಕಿದೆ. ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಶ್ರೀಲಕ್ಷ್ಮಿನಾರಾಯಣಸ್ವಾಮಿಯ ವೈಭವದ ರಥೋತ್ಸವಕ್ಕೆ ವಿವಿಧ ತಾಲೂಕು, ಜಿಲ್ಲೆಗಳಿಂದ ಆಗಮಿಸಿರುವ ಭಕ್ತರಿಗೆ ಭಗವಂತನ ಕೃಪೆ ದೊರಕಲಿ ಎಂದು ಆಶಿಸಿದರು.ರಥೋತ್ಸವದ ಅಂಗವಾಗಿ ಬೆಳಗ್ಗೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಶ್ರೀಲಕ್ಷ್ಮಿನಾರಾಯಣಸ್ವಾಮಿಯ ದೇವಾಲಯವನ್ನು ತಳಿರುತೋರಣ, ರಂಗವಲ್ಲಿಗಳಿಂದ ಅಲಂಕರಿಸಲಾಗಿತ್ತು. ನಂತರ ಮಿಥುನ ಲಗ್ನದಲ್ಲಿ ಲಕ್ಷ್ಮಿನಾರಾಯಣಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತಗೊಳಿಸಲಾಗಿದ್ದ ಬ್ರಹ್ಮರಥದಲ್ಲಿ ಇಡಲಾಯಿತು.
ಅರ್ಚಕ ರಂಗನಾಥ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ವಿಪ್ರಭಾಂಧವರು ಸ್ವಾಮಿಗೆ ವಿವಿಧ ಬಗೆಯ ಪೂಜಾ ಕಂಕೈರ್ಯಗಳನ್ನು ನೆರವೇರಿಸಿದರು. ನೂರಾರು ಭಕ್ತರು ಬ್ರಹ್ಮರಥ ಎಳೆಯುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ಹಣ್ಣುಕಾಯಿ ಕೊಟ್ಟು ಪೂಜೆ ಮಾಡಿಸಿ ಹಣ್ಣುಜವನ ಎಸೆಯುವ ಮೂಲಕ ಶ್ರೀ ಲಕ್ಷ್ಮಿನಾರಾಯಣಸ್ವಾಮಿಯಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಿದ್ದರು.ಬ್ರಹ್ಮರಥೋತ್ಸವದಲ್ಲಿ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಟಿ.ಲೋಕೇಶ್, ಗ್ರಾಪಂ ಅಧ್ಯಕ್ಷೆ ದಿವ್ಯಗಿರೀಶ್, ಶೀಳನೆರೆ ಹೋಬಳಿ ರಾಜಸ್ವ ನಿರೀಕ್ಷಕ ರಾಜಮೂರ್ತಿ, ಗ್ರಾಮಾಧಿಕಾರಿ ಕೆಂಚಪ್ಪ, ಮುಖಂಡರಾದ ರವಿ, ಆನಂದ್‌ಕುಮಾರ್, ಗಿರೀಶ್, ಕುಮಾರಸ್ವಾಮಿ, ಕಾಂತರಾಜು, ಶಿವಕುಮಾರ್, ಸೇರಿದಂತೆ ಸಾವಿರಾರು ಭಕ್ತರು ಹಾಜರಿದ್ದರು.ಶ್ರೀರಾಮದೇವರ ಹೂವಿನ ಪಲ್ಲಕ್ಕಿ ಮೆರವಣಿಗೆಮಳವಳ್ಳಿ:ಪಟ್ಟಣದ ಪೇಟೆ ಗಂಗಮತಸ್ಥರ ಬೀದಿ ಅಡ್ಡೇನಿಂಗಯ್ಯನಕೇರಿಯ ಸಿದ್ದಪ್ಪಾಜಿ ಶ್ರೀರಾಮ ಮಂದಿರದ ಶ್ರೀರಾಮ ದೇವರ ಭಾವಚಿತ್ರವನ್ನು ಹೂವಿನಪಲ್ಲಕ್ಕಿ ಇಟ್ಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಯಜಮಾನ್ ವೆಂಕಟೇಶ್, ಜಯರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಭಜನೆ ಮಂಡಳಿಯ ಅಧ್ಯಕ್ಷ ಎಂ.ಎಚ್.ಶ್ರೀಕಂಠಯ್ಯ, ಜವರೇಮಾದಯ್ಯ, ಕೃಷ್ಣ, ರಘು, ಮಾದೇಶ್ ಇದ್ದರು.