ಬಾಳೆಹೊನ್ನೂರುರಾಜ್ಯದ ವಿವಿಧ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾವಳಿಗೆ ಶ್ರೀಲಂಕಾ ಮಾದರಿ ಆನೆ ಕ್ಯಾಂಪ್‌ಗಳನ್ನು ನಿರ್ಮಿಸ ಬೇಕಾದ ಅಗತ್ಯವಿದೆ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರಾಜ್ಯದ ವಿವಿಧ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾವಳಿಗೆ ಶ್ರೀಲಂಕಾ ಮಾದರಿ ಆನೆ ಕ್ಯಾಂಪ್‌ಗಳನ್ನು ನಿರ್ಮಿಸ ಬೇಕಾದ ಅಗತ್ಯವಿದೆ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹೇಳಿದರು.ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಶತಮಾನೋತ್ಸವ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಮಾನವ-ಪ್ರಾಣಿ ಸಂಘರ್ಷ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ 6 ಸಾವಿರಕ್ಕೂ ಅಧಿಕ ಆನೆಗಳಿದ್ದು, ಇವುಗಳಲ್ಲಿ ಕೇವಲ 300-350 ಆನೆಗಳು ಮಾತ್ರ ಜನವಸತಿ ಪ್ರದೇಶಗಳಿಗೆ, ರೈತರ ಜಮೀನುಗಳಿಗೆ ಬಂದು ಸಮಸ್ಯೆ ಉಂಟು ಮಾಡುತ್ತಿವೆ. ಹಾಸನ ಜಿಲ್ಲೆ ಒಂದೇ ಕಡೆಯಲ್ಲಿ 80ರಿಂದ 90 ಆನೆಗಳು ಜನವಸತಿ ಪ್ರದೇಶದಲ್ಲಿ ಸೇರಿಕೊಂಡಿವೆ ಎಂದರು.

ಇವುಗಳನ್ನು ಕಾಡಿಗೆ ಅಟ್ಟಿದರೆ ಅವುಗಳು ಅಲ್ಲಿ ನೆಲೆ ನಿಲ್ಲುವುದಿಲ್ಲ. ಅವುಗಳು ಪುನಃ ಜನವಸತಿ ಪ್ರದೇಶಕ್ಕೆ ಬರಲಿದೆ. ಈ ಆನೆಗಳು ಅರಣ್ಯದ ಆಹಾರಗಳಿಗೆ ಒಗ್ಗಿಕೊಳ್ಳದೆ ರಾಗಿ, ಕಬ್ಬು, ಭತ್ತ ಮುಂತಾದ ಪ್ರೋಟೀನ್‌ಯುಕ್ತ ಆಹಾರಗಳಿಗೆ ಒಗ್ಗಿಕೊಂಡಿವೆ. ಅರಣ್ಯ ಇಲಾಖೆ ಕೇವಲ ಒಂದೊಂದು ಆನೆಗಳನ್ನು ಹಿಡಿದು ಕಾಡಿಗೆ ಅಟ್ಟಿದರೆ ಮಾತ್ರ ಸಮಸ್ಯೆ ಬಗೆಹರಿಯಲ್ಲ. ಅವುಗಳನ್ನು ಕುಟುಂಬ ಸಮೇತವಾಗಿ ಕಾಡಿಗೆ ಅಟ್ಟಿದರೆ ಸಮಸ್ಯೆಗೆ ಕಡಿವಾಣ ಹಾಕಬಹುದು. ಚಿಕ್ಕಮಗಳೂರು ಜಿಲ್ಲೆಯ ಕಾಡಾನೆ ಸಮಸ್ಯೆಗೆ ಭದ್ರಾನದಿ ಪಕ್ಕದಲ್ಲಿ ಸಾಕಷ್ಟು ಎಕರೆ ಪ್ರದೇಶದಲ್ಲಿ ಆನೆ ಕ್ಯಾಂಪ್ ನಿರ್ಮಾಣ ಮಾಡಿ ಉಪಟಳ ನೀಡುವ ಆನೆಗಳನ್ನು ಹಿಡಿದು ಕ್ಯಾಂಪಿನಲ್ಲಿ ಇರಿಸಿ ತರಬೇತಿ ನೀಡಬೇಕು. ಇದರಿಂದ ಆನೆ ಹಾವಳಿ ಕಡಿಮೆಯಾಗಲಿದೆ, ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ರಾಜ್ಯದ 6 ಸಾವಿರ ಆನೆಗಳಿಂದ ನಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಕೆಲವೇ ಕೆಲವು ಆನೆಗಳಿಂದ ನಿರಂತರ ಸಮಸ್ಯೆಯಾಗುತ್ತಿದೆ. ಉಪಟಳ ನೀಡುವ ಆನೆಗಳ ಆಹಾರ ಪದ್ಧತಿವನ್ನು ಬದಲಾಯಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರವೆಂದರೆ ಶ್ರೀಲಂಕಾದಲ್ಲಿ ಕಾಡಾನೆಗಳಿಗೆ ಮಾಡಿರುವ ಆನೆ ಕ್ಯಾಂಪ್ ಮಾದರಿ ಮಾತ್ರ ಸಾಧ್ಯವಿದೆ.ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಆ ಯೋಜನೆ ಮಾಡುವತ್ತ ಗಮನಹರಿಸಬೇಕಿದೆ. ಇಲ್ಲಿನ ಜನಪ್ರತಿ ನಿಧಿಗಳು, ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಅಲ್ಲಿನ ಯೋಜನೆಗಳ ಬಗ್ಗೆ ಅಧ್ಯಯನ ಮಾಡಬೇಕಿದೆ ಎಂದರು.ಗೋಷ್ಠಿಯಲ್ಲಿ ತೆಂಕಲಗೂಡು ಎಸಳೂರು ಹಿರೇಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಬೆಂಗಳೂರು ಎಎನ್‌ಸಿಎಫ್ ಸಂಸ್ಥೆ ಸಿಇಎಸ್ ಡಾ.ಸುರೇಂದ್ರ ವರ್ಮಾ, ನೇತ್ರಂ ಎಲ್‌ಎಲ್‌ಸಿ ಸಿಇಓ ಪೌಲ್ ಮ್ಯಾಥ್ಯೂ, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ ಮತ್ತಿತರರು ಹಾಜರಿದ್ದರು.೨೩ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಶತಮಾನೋತ್ಸವ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಮಾನವ-ಪ್ರಾಣಿ ಸಂಘರ್ಷ ಗೋಷ್ಠಿಯಲ್ಲಿ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿದರು.