ಶ್ರೀ ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದವರು : ನಾರಾಯಣರೆಡ್ಡಿ ಕನಕರೆಡ್ಡಿ

| Published : Aug 02 2024, 12:46 AM IST

ಶ್ರೀ ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದವರು : ನಾರಾಯಣರೆಡ್ಡಿ ಕನಕರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಡಾ. ಮಹಾಂತ ಶಿವಯೋಗಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಕರೆ ನೀಡಿದರು.

- ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ನಡೆದ ವ್ಯಸನಮುಕ್ತ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಡಾ. ಮಹಾಂತ ಶಿವಯೋಗಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ನಗರದ ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಸಭಾಂಗಣದಲ್ಲ್ಲಿಡಾ. ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ವ್ಯಸನಮುಕ್ತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವ್ಯಸನ ಮುಕ್ತ ಕುಟುಂಬ, ಸಮಾಜ, ಗ್ರಾಮಗಳ ನಿರ್ಮಾಣ ಮಾಡುವ ಜೊತೆಗೆ ತಮ್ಮ ಜೋಳಿಗೆ ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿ, ಸಾಹಿತಿಗಳು ಸಮಾಜ ಕಳಕಳಿಯ ಕವಿಗಳು ಧರ್ಮಗುರುಗಳನ್ನು ಆಹ್ವಾನಿಸಿ ಅವರಿಂದ ಉಪನ್ಯಾಸ ಮಾಡಿಸುವ ಮೂಲಕ ವ್ಯಸನಿಗಳ ಮನಪರಿವರ್ತನೆ ಮಾಡುವ ಜೊತೆಗೆ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಚಟಗಳಿಗೆ ಬಲಿಯಾಗದಂತೆ ಅರಿವು ಮೂಡಿಸುತ್ತಿದ್ದರು ಎಂದರು.

ಯುವ ಪೀಳಿಗೆ ತಮ್ಮ ಉತ್ತಮ ಭವಿಷ್ಯ ಗಮನದಲ್ಲಿಟ್ಟುಕೊಂಡು ಆರೋಗ್ಯಯುತ ಜೀವನಕ್ಕೆ ಒತ್ತು ನೀಡಬೇಕು. ದುಶ್ಚಟ ಗಳಿಗೆ ಬಲಿಯಾದರೆ ತಮ್ಮ ಆರೋಗ್ಯ ಹದಗೆಡುವುದಲ್ಲದೆ. ಇಡೀ ಕುಟುಂಬ ಸಂಕಷ್ಟ ಎದುರಿಸಬೇಕಾಗುತ್ತದೆ. ದುಶ್ಚಟ ಗಳನ್ನು ಬಿಡುವುದರಿಂದ ದೈಹಿಕ ಆರೋಗ್ಯ ಸುಧಾರಣೆ ಜೊತೆಗೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು ಮಾತನಾಡಿ, ಯುವ ಜನತೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗ ಬಾರದು. ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ತಮ್ಮ ನೆರೆ ಹೊರೆಯವರಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.ಡಿವೈಎಸ್‌ಪಿ ಶೈಲೇಂದ್ರ ಮಾತನಾಡಿ, ಮಾದಕ ವಸ್ತುಗಳು, ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಂದ ಯುವ ಜನತೆ ದೂರವಿರಬೇಕು. ಧೂಮಪಾನ, ಗುಟ್ಕಾ ಸೇವನೆಯಿಂದ ಶ್ವಾಸಕೋಶ, ಬಾಯಿ ಕ್ಯಾನ್ಸರ್ ಉಂಟಾಗುತ್ತದೆ. ಆದ್ದರಿಂದ ಯುವ ಜನ ಎಲ್ಲಾ ರೀತಿಯ ವ್ಯಸನಗಳಿಂದ ದೂರ ಉಳಿಯಬೇಕು ಎಂದು ತಿಳಿಸಿದರು.

ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿ, ಡಾ. ಮಹಾಂತ ಶಿವಯೋಗಿಗಳು ದುಶ್ಚಟಗಳು, ದುರ್ವ್ಯಸ ನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಃ ಪರಿವರ್ತಿಸಿ ಜನರಲ್ಲಿನ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದರಲ್ಲದೇ ದೇಶ ವಿದೇಶಗಳಲ್ಲೂ ಕೂಡ ಜಾಗೃತಿ ಮೂಡಿಸಿದ್ದರು ಎಂದು ಹೇಳಿದರು.

ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಎಂ.ವಿ. ಶ್ಯಾಮ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜೇಗೌಡ ಪ್ರತಿಜ್ಞಾ ವಿಧಿ ಭೋಧಿಸಿದರು. ಸರ್ಕಾರಿ ಪಾಲಿಟೆಕ್ನಿಕ್‌ನ ಹೇಮಾವತಿ ಮತ್ತು ಸಂಗಡಿಗರು ಪ್ರಾರ್ಥಿಸಿ, ನಾಡಗೀತೆ ಹಾಡಿದರು. ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಜಿ. ಉಮೇಶ್ ಸ್ವಾಗತಿಸಿದರು. ಸಹಾಯಕ ಗ್ರಂಥ ಪಾಲಕ ಮಹೇಶಪ್ಪ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ತಹಸೀಲ್ದಾರ್ ಡಾ. ಸುಮಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರ್‌ಸಿಹೆಚ್‌ಒ ಡಾ. ಮಂಜುನಾಥ್, ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್‌ನ ನಿವೃತ್ತ ಪ್ರಾಂಶುಪಾಲ ಓಂಕಾರಸ್ವಾಮಿ ಇದ್ದರು.

1 ಕೆಸಿಕೆಎಂ 4

ಚಿಕ್ಕಮಗಳೂರಿನ ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಸಭಾಂಗಣದಲ್ಲ್ಲಿ ಗುರುವಾರ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ನಡೆದ ವ್ಯಸನಮುಕ್ತ ದಿನಾಚರಣೆಯನ್ನು ನಾರಾಯಣರೆಡ್ಡಿ ಕನಕರೆಡ್ಡಿ ಉದ್ಘಾಟಿಸಿದರು.