ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಪೂರ್ಣೇಶ್ವರಿ ಅನ್ನಛತ್ರ ಲೋಕಾರ್ಪಣೆ

| Published : Feb 04 2024, 01:36 AM IST

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಪೂರ್ಣೇಶ್ವರಿ ಅನ್ನಛತ್ರ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅನ್ನಛತ್ರದ ಸಮೃದ್ಧಿಗಾಗಿ ಬೆಳಗ್ಗೆ ಬೆಳಿಗ್ಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮದಲ್ಲಿ ಸುವಸ್ತುಗಳನ್ನು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಇರಿಸಿ ಪ್ರಾರ್ಥಿಸಿ, ಬಳಿಕ ಮೆರವಣಿಗೆ ಮೂಲಕ ಅನ್ನಛತ್ರಕ್ಕೆ ತಂದು ಅಲ್ಲಿ ಸಮರ್ಪಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಭಕ್ತಾದಿಗಳಿಗೆ ಅನ್ನಪ್ರಸಾನ ನೀಡುವ ನಿಟ್ಟಿನಲ್ಲಿ ನೂತವಾಗಿ ನಿರ್ಮಿಸಲಾಗಿರುವ ಶ್ರೀ ಅನ್ನಪೂರ್ಣೇಶ್ವರಿ ಅನ್ನಛತ್ರದ ಲೋಕಾರ್ಪಣೆ ಕಾರ್ಯಕ್ರಮವು ಶನಿವಾರ ನಡೆಯಿತು. ಅನ್ನಛತ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಅನ್ನಪೂರ್ಣಾ ಅನ್ನಛತ್ರದಲ್ಲಿ ಭೋಜನದ ರೀತಿಯಾಗಿ ಅಲ್ಲ ಸ್ವಾಮಿ ಪ್ರಸಾದ ಭೋಜನದ ರೂಪದಲ್ಲಿ ಅನ್ನಪ್ರಸಾದ ನಿರಂತರವಾಗಿ ನಡೆಯಲಿ ಎಂದರು.

ಅನ್ನಛತ್ರದ ಲೋಕಾರ್ಪಣೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ದೇವಸ್ಥಾನದ ಸಮಿತಿಯ ಪರಿಕಲ್ಪನೆಯಂತೆ ಮಾಸ್ಟರ್ ಪ್ಲಾನ್ ಆಗಿದೆ. ೨ ಕೋಟಿ ರು. ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಇನ್ನು ೫ ಕೋಟಿ ಅನುದಾನದಲ್ಲಿ ವಸತಿಗೃಹಕ್ಕೆ ಮಂಜೂರಿಗೆ ಮನವಿ ಸಲ್ಲಿಸಿದೆ. ಒಟ್ಟಿನಲ್ಲಿ ೫೦ ಕೋಟಿ ರು. ಅನುದಾನದಲ್ಲಿ ಮಾಸ್ಟರ್ ಪ್ಲಾನ್ ಆಗಿದೆ. ಇನ್ನು ಯಾವುದೇ ಸಮಿತಿ ಬರಲಿ ಅದರ ಮೂಲಕ ಕೆಲಸ ಮಾಡಬಹುದು. ಭಕ್ತರ ಹಣ ದೇವರಿಗೆ ಸಂದಾಯ ಆಗುತ್ತದೆ. ಪುತ್ತೂರು ಮಹಾಲಿಂಗೇಶ್ವರ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕೆಲಸ ಆಗಬೇಕು. ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಯಾತ್ರಾರ್ಥಿಗಳ ಶೇಕಡ ಅರ್ಧದಷ್ಟು ಜನರು ಇಲ್ಲಿಗೆ ಬಂದುಹೋಗಬೇಕು ಎಂದು ಆಶಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮಾತನಾಡಿ, ದೇವಸ್ಥಾನದಲ್ಲಿ ರಾಜಕೀಯ ಮಾಡದೆ ದೇವಸ್ಥಾನದ ಅಭಿವೃದ್ಧಿ ಕೆಲಸ ಮುಂದುವರಿಯುತ್ತದೆ. ಈಗಾಗಲೇ ೩೦೦ ಮಂದಿ ಟೇಬಲ್‌ನಲ್ಲಿ ಕೂತು ಊಟ ಮಾಡುವ ವ್ಯವಸ್ಥೆ ಸಂಪೂರ್ಣ ಕೆಲಸ ಸಿದ್ಧಗೊಂಡಿದೆ. ಒಂದು ತಿಂಗಳ ಅವಧಿಯಲ್ಲಿ ಮುಖಮಂಟಪ ಪೂರ್ಣಗೊಳ್ಳಲಿದೆ ಎಂದರು.

ಅನ್ನಛತ್ರದ ಸಮೃದ್ಧಿಗಾಗಿ ಬೆಳಗ್ಗೆ ಬೆಳಿಗ್ಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮದಲ್ಲಿ ಸುವಸ್ತುಗಳನ್ನು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಇರಿಸಿ ಪ್ರಾರ್ಥಿಸಿ, ಬಳಿಕ ಮೆರವಣಿಗೆ ಮೂಲಕ ಅನ್ನಛತ್ರಕ್ಕೆ ತಂದು ಅಲ್ಲಿ ಸಮರ್ಪಣೆ ಮಾಡಲಾಯಿತು. ಇದೇ ಸಂದರ್ಭ ಮಹಿಳೆಯರಿಂದ ವಿಶೇಷ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಡಾ.ಸುಧಾ ಎಸ್ ರಾವ್, ವೀಣಾ ಬಿ.ಕೆ., ಬಿ. ಐತ್ತಪ್ಪ ನಾಯ್ಕ ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು ಮತ್ತಿತರರು ಉಪಸ್ಥಿತರಿದ್ದರು.