ಯಾವುದೇ ವ್ಯಕ್ತಿ ತಮ್ಮ ದೈನಂದಿನ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕನಿಷ್ಠ 30 ನಿಮಿಷಗಳ ಕಾಲವಾದರೂ ವ್ಯಾಯಾಮಕ್ಕೆ ಸಮಯ ಮೀಸಲಿಡಬೇಕು. ಇದರಿಂದ ಕಾಯಿಲೆಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಅಡ್ವೋಕೇಟ್ ಅಲಯನ್ಸ್ ಸಂಸ್ಥೆಯಿಂದ ಹಿರಿಯ ವಕೀಲ ಬಿ.ಅಪ್ಪಾಜಿಗೌಡರಿಗೆ ಶ್ರೀನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಪಟ್ಟಣದ ಮಳವಳ್ಳಿ ರಸ್ತೆಯ ಎಂ.ಎಂ.ಸಭಾಂಗಣದಲ್ಲಿ ನಡೆದ ಕೆಂಪೇಗೌಡ ಜಯಂತಿ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಅಲೆಯನ್ಸ್ ಒಕ್ಕೂಟದ ಸೌತ್ ಮಲ್ಟಿಪಲ್ ಕೌನ್ಸಿಲ್‌ನ ಉಪಾಧ್ಯಕ್ಷ ಕೆ.ಟಿ.ಹನುಮಂತು ವಕೀಲ ಅಪ್ಪಾಜಿ ಗೌಡರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.

ಇದೇ ವೇಳೆ ವೈದ್ಯರ ದಿನಾಚರಣೆ ಪ್ರಯುಕ್ತ ದಂತ ವೈದ್ಯ ಡಾ.ಡಿ.ಪಿ.ವಿನುತ್, ಡಾ.ಬಿ.ಸಿ ಐಶ್ವರ್ಯ ಮತ್ತು ವೈದ್ಯಕೀಯ ವಿದ್ಯಾರ್ಥಿನಿ ಲಿಖಿತ್ ಚಂದ್ರ ಹಾಗೂ ಎಸ್ಸೆಸ್ಸೆಲ್ಸಿ ತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ತೇರ್ಗಡೆ ಹೊಂದಿರುವ 15 ಮಂದಿ ವಕೀಲರ ಮಕ್ಕಳಿಗೆ ಜಿಲ್ಲಾ ರಾಜ್ಯಪಾಲ ಕೆ.ಆರ್.ಶಶಿಧರ್ ಈಚೆಗೆರೆ ಅವರು ಸಂಸ್ಥೆಯಿಂದ ನೀಡಲಾದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

ಪ್ರಶಸ್ತಿ ಪುರಸ್ಕೃತರ ಪರ ಡಾ.ಡಿ.ಪಿ.ವಿನುತ್ ಮಾತನಾಡಿ, ಯಾವುದೇ ವ್ಯಕ್ತಿ ತಮ್ಮ ದೈನಂದಿನ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕನಿಷ್ಠ 30 ನಿಮಿಷಗಳ ಕಾಲವಾದರೂ ವ್ಯಾಯಾಮಕ್ಕೆ ಸಮಯ ಮೀಸಲಿಡಬೇಕು. ಇದರಿಂದ ಕಾಯಿಲೆಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಅಂತಾರಾಷ್ಟ್ರೀಯ ಅಲೆಯನ್ಸ್ ಸಂಸ್ಥೆ ಕಾರ್ಯದರ್ಶಿ ಡಾ.ನಾಗರಾಜ ವಿ.ಭೈರಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ಎಚ್.ಮಾದೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಡ್ವಕೇಟ್ ಸಂಸ್ಥೆ ಅಧ್ಯಕ್ಷ ಎಂ.ಜೆ.ಚಿಕ್ಕಣ್ಣಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಕೀಲರ ಪರಿಷತ್ತಿನ ನಿರ್ದೇಶಕಿ ಪಿ.ವಿ.ಕಲ್ಪನಾ, ಒಂದನೇ ಉಪರಾಜ್ಯಪಾಲ ಕೆ.ಎಸ್. ಚಂದ್ರಶೇಖರ್, ಎರಡನೇ ಉಪರಾಜ್ಯಪಾಲ ಎಂ.ಎನ್.ಶಿವಣ್ಣ, ಸಂಸ್ಥೆ ವಿ.ಎಸ್.ನಾಗರಾಜು, ಚೆಲುವರಾಜು, ಕೆ.ಯೋಗಾನಂದ, ಮಹೇಶ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.