ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಶ್ರೀ ನಾಡು ಕಡಪಾಲಪ್ಪ ದೇವಾಲಯದ ಪುನರ್ ಪ್ರತಿಷ್ಠಾ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಏ.20ರಿಂದ 25ರ ವರೆಗೆ ನಡೆಯಲಿದೆ.ಬೇಂಗೂರು ಗ್ರಾಮದ ಶ್ರೀದೇವರ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಸಪರಿವಾರ ಸಹಿತ ಕಡಪಾಲಪ್ಪ ದೇವರ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಉಡುಪಿ ಪೇಜಾವರ ಅದೋಕ್ಷಜ ಮಠದ ವಿಶ್ವ ಪ್ರಸನ್ನ ತೀರ್ಥರ ಸಮ್ಮುಖದಲ್ಲಿ ನೆರವೇರಲಿದೆ. ದೇವರ ಅರ್ಚಕ ರಾಧಾಕೃಷ್ಣ ಭಟ್ಟ ಉಪಸ್ಥಿತಿಯಲ್ಲಿ ವೈದಿಕ ವಿದ್ವಾಂಸ ಕಳತೂರು ಉದಯತಂತ್ರಿ ನೇತೃತ್ವದಲ್ಲಿ, ರಂಜಾಳ ಗುರುರಾಜ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.
ಕ್ಷೇತ್ರದ ಇತಿಹಾಸ:ಬ್ರಹ್ಮ ಕ್ಷೇತ್ರದ ಕಾವೇರಿ ಮಡಿಲಿನಲ್ಲಿರುವ ನಾಡು ಕಡಪಾಲಪ್ಪ ದೇವಾಲಯಕ್ಕೆ ಸುಮಾರು 1700 ವರ್ಷಗಳ ಇತಿಹಾಸವಿದೆ. ನಾಡಿನ ಭಕ್ತರು ಒಂದಾಗಿ ಜ್ಯೋತಿಷಿ ವೆಂಕಟೇಶ ಆಚಾರ್ಯ ಪಡುಬಿದ್ರಿ ಅವರ ಅಷ್ಟಮಂಗಲ ಪ್ರಶ್ನೆ ನಡೆಸಿದ್ದು ಈ ಪ್ರಕಾರ ಏ.20ರಂದು ಬೆಳಗ್ಗೆ ದ್ವಾದಶ ನಾಳಿಕೇರ ಗಣಯಾಗ, ನವಗ್ರಹ ಯಾಗ, ರಕ್ಷಾ ಕಲಶ ಪ್ರತಿಷ್ಠೆ ನಡೆಯಲಿದೆ. 21ರಂದು ಬಿಂಬಶುದ್ಧಿ ಪ್ರಾಯಶ್ಚಿತ ಹೋಮಗಳು ನಡೆಯಲಿವೆ. ಆ ದಿನ ಸಂಜೆ ಕೊಳಲು ವಾದನ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
22ರಂದು ಶ್ರೀ ವಿಶ್ವ ಪ್ರಸನ್ನ ತೀರ್ಥರಿಂದ ಪ್ರಾತಃಕಾಲ 8.32ರ ವೃಷಭ ಲಗ್ನ ಮುಹೂರ್ತದಲ್ಲಿ ನಾಡು ಕಡಪಲಪ್ಪ ದೇವರ ಪುನರ್ ಪ್ರತಿಷ್ಠೆ, ಜೀವಕುಂಭಾಭಿಷೇಕ, ಮಹಾ ಗಣಪತಿ ದೇವರ ಪ್ರತಿಷ್ಠೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.ಅಭಿಜ್ಞಾ ಅವರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಲಿದೆ.
23ರಂದು ಶಾಂತಿ ಪೂಜೆ, ಪ್ರಾಯಶ್ಚಿತ ಹೋಮ, ಆಶ್ಲೇಷ ಬಲಿ ನಡೆಯಲಿದೆ. 24ರಂದು ತತ್ವ ಹೋಮ, ಬ್ರಹ್ಮ ಕಲಶ, ಮಂಡಲ ಪೂಜೆ ನಡೆಯಲಿದೆ. 25ರಂದು ಕಡಪಾಲಪ್ಪ ದೇವರಿಗೆ ಶಾಂತಿ ಪ್ರಾಯಶ್ಚಿತ ಹೋಮಗಳು, ತತ್ವ ಕಲಶಾ ಅಭಿಷೇಕ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿ ಪ್ರಕಟಣೆ ತಿಳಿಸಿದೆ.