ಮೈಸೂರು ನಗರದ ವಿವಿಧ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಗಳಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ಭಕ್ತಿ, ಸಡಗರ, ಸಂಭ್ರಮ ಮತ್ತು ವೈಭವದಿಂದ ಸೋಮವಾರ ಉತ್ತರಾರಾಧನೆಯೊಂದಿಗೆ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ವಿವಿಧ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಗಳಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ಭಕ್ತಿ, ಸಡಗರ, ಸಂಭ್ರಮ ಮತ್ತು ವೈಭವದಿಂದ ಸೋಮವಾರ ಉತ್ತರಾರಾಧನೆಯೊಂದಿಗೆ ಸಂಪನ್ನಗೊಂಡಿತು.

ಕಳೆದ ಮೂರು ದಿನಗಳಿಂದ ನಡೆದ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆಯ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ರಾಜಬೀದಿಗಳಲ್ಲಿ ಮಹಾರಥೋತ್ಸವ

ಉತ್ತಾರಾರಾಧನೆ ಅಂಗವಾಗಿ ಸೋಮವಾರ ಎಲ್ಲ ಮಠಗಳಿಂದ ರಾಜಬೀದಿಗಳಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿಯೊಂದು ಮಠಗಳಲ್ಲಿ ಬಣ್ಣ ಬಣ್ಣದ ದೀಪಾಲಂಕಾರ ಮಾಡಲಾಗಿತ್ತು, ಮಠದ ಒಳಾವರಣದಲ್ಲಿ ಮಾಡಿದ್ದ ಹೂವು, ಹಣ್ಣುಗಳಿಂದ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು.

ರಾಯರ ಬೃಂದಾವನಕ್ಕೆ ಹೂಗಳಿಂದ ಅಲಂಕಾರ:

ರಾಯರ 355ನೇ ಆರಾಧನೆಯ ಅಂಗವಾಗಿ ಪ್ರತಿನಿತ್ಯ ರಾಯರ ಬೃಂದಾವನಕ್ಕೆ ಹೂವಿನಿಂದ ಮಾಡುತ್ತಿದ್ದ ವಿವಿಧ ಬಗೆಯ ಅಲಂಕಾರ ಭಕ್ತ ಮನ ಸೆಳೆಯಿತು. ಪ್ರತಿನಿತ್ಯ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು.

ನಗರದ ನಾರಾಯಣಶಾಸ್ತ್ರೀ ರಸ್ತೆಯಲ್ಲಿರುವ ಸುಬ್ಬರಾಯನಕೆರೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಉತ್ತರಾರಾಧನೆ ಅಂಗವಾಗಿ ಬೆಳಗ್ಗಿನಿಂದಲೇ ಉತ್ಸವರಾಯರಿಗೆ ಪಾದಪೂಜೆ, ಪಂಚಾಮೃತ ನಂತರ ರಾಜಬೀದಿಗಳಲ್ಲಿ ಮಹಾರಥೋತ್ಸವ ನಂತರ ಹಸ್ತೋದಕ, ಮಹಾಮಂಗಳಾರತಿ. ಪ್ರಸಾದ ವಿನಿಯೋಗವಾಯಿತು.

ವೇದಾದ್ರಿ ಭಜನಾ ಮಂಡಳಿ, ಚಿನ್ಮಯಿ ಭಜನಾ ಮಂಡಳಿ, ಹಸನ್ಮುಖಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ಸಂಜೆ ದಿಷಾ ಡಿ. ರಾವ್‌ಮತ್ತು ಆರ್. ಸಾನ್ವಿ ಅವರಿಂದ ಹಾಗೂ ಬಾಗಲಕೋಟೆಯ ಜಯತೀರ್ಥ ತಾಸ್‌ಗಾಂವ್‌ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.

ರಾಮಕೃಷ್ಣನಗರ ಶ್ರೀನಿವಾಸ ದೇವಸ್ಥಾನ:

ನಗರದ ರಾಮಕೃಷ್ಣನಗರದ ಐ ಬ್ಲಾಕ್‌ನ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿರುವ ಶ್ರೀ ಶ್ರೀನಿವಾಸ ದೇವಸ್ಥಾನದ ಆವರಣದಲ್ಲಿ ಶ್ರೀ ಗುರುರಾಘವೇಂದ್ರ ತೀರ್ಥ, ಗುರುಸಾರ್ವಭೌಮರ 355ನೇ ಉತ್ತರಾರಾಧನೆ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆನಿಂದಲೇ ರಾಯರಿಗೆ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ, ನೈವೇಧ್ಯ, ಪ್ರಸಾದ ವಿನಿಯೋಗ ನೆರವೇರಿತು.

ನಿರ್ಮಾಣ್‌ನಗರದ ಕಲ್ಪವೃಕ್ಷ ಕ್ಷೇತ್ರ:

ನಗರದ ಎಂ.ಬಿ.ಹಳ್ಳಿ ರಸ್ತೆ, ನಿರ್ಮಾಣ್ ನಗರ, ಜಂತಗಳ್ಳಿಯಲ್ಲಿರುವ ಕಲ್ಪವೃಕ್ಷ ಕ್ಷೇತ್ರ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ 355ನೇ ರಾಯರ ಉತ್ತರಾರಾಧನೆ ಅಂಗವಾಗಿ ಬೆಳಗ್ಗಿನಿಂದ ಪಂಚಾಮೃತ, ನಿರ್ಮಾಣ್‌ನಗರದ ಮುಖ್ಯರಸ್ತೆಯಲ್ಲಿ ಶ್ರೀರಾಯರಿಗೆ ಮಹಾರಥೋತ್ಸವ ನಂತರ ಡೋಲೋತ್ಸವ, ಸ್ವಸ್ತಿವಾಚನ, ಹಸ್ತೋದಕ ಮಹಾಮಂಗಳಾರತಿ, ತೀರ್ಥಪ್ರಸಾದ ನೆರವೇರಿತು.

ಜಯಲಕ್ಷ್ಮೀಪುರಂ ಶ್ರೀ ರಾಘವೇಂದ್ರಸ್ವಾಮಿ ಮಠ:

ಜಯಲಕ್ಷ್ಮೀಪುರಂ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಉತ್ತರಾರಾಧನೆ ಅಂಗವಾಗಿ ಬೆಳಗ್ಗೆ ಪ್ರಮುಖ ಬೀದಿಗಳಲ್ಲಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ಗುರುರಾಯರ ಮಹಾರಥೋತ್ಸವ ನೆರವೇರಿತು.

ಸಂಜೆ ಲಹರಿ ಗಾನ ವೃಂದ ಅವರಿಂದ ಭಜನಾ ಕಾರ್ಯಕ್ರಮ, ವಿದುಷಿ ಅಶ್ವಿನಿ ಸತೀಶ್‌ಅವರಿಂದ ಗಾಯನ, ಸಿ.ವಿ. ಶ್ರುತಿ- ವಯೋಲಿನ್, ಎ. ರಾಧೇಶ್‌ಮೃದಂಗ ಪ್ರಸ್ತುತಪಡಿಸಿದರು.

ಕೃಷ್ಣಮೂರ್ತಿಪುರ ಮಠ:

ಕೃಷ್ಣಮೂರ್ತಿಪುರಂನ ಶ್ರೀ ರಾಘವೇಂದ್ರಸ್ವಾಮಿಗಳ ವೃಂದಾವನ ಟ್ರಸ್ಟ್‌ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನದಲ್ಲಿ ಫಲಪಂಚಾಮೃತ, ಅಷ್ಟೋತ್ತರ, ಪುಷ್ಪಾಲಂಕಾರ, ಪುಷ್ಪಾರ್ಚನೆ, ಮಹಾರಥೋತ್ಸವ ನೆರವೇರಿತು.

ಟಿ.ಕೆ.ಬಡಾವಣೆಯ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್‌ ನಿಂದ ಬೆಳಗ್ಗೆ ಪುರಂದರ ಭಜನಾಮಂಡಳಿಯಿಂದ ಭಜನೆ, ಮಹಾರಥೋತ್ಸವ, ಸಂಜೆ ಉಲುಚಿ ಪಿ. ರಾವ್‌ಹಾಗೂ ತಂಡದಿಂದ ದಾಸವಾಣಿ ನಡೆಯಿತು.

ದಟ್ಟಗಳ್ಳಿ 3ನೇ ಹಂತದ ಸೋಮನಾಥನಗರದ ಶ್ರೀ ಗುರುರಾಘವೇಂದ್ರ ಆರಾಧನಾ ಸಮಿತಿಯಿಂದ ಬೆಳಗ್ಗೆ ಧಾರ್ಮಿಕಗಳು, ಸಂಜೆ ಪಂಡಿತ್‌ಬಾಲಚಂದ್ರ ನಾಕೋಡ ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಸತೀಶ್‌ಕೊಳ್ಳಿ- ಹಾರ್ಮೋನಿಯಂ, ರಾಘವೇಂದ್ರ ನಾಕೋಡ -ತಬಲಾ ನುಡಿಸಿದರು.

ವಿ.ವಿ.ಮೊಹಲ್ಲಾದ 12ನೇ ಅಡ್ಡರಸ್ತೆಯಲ್ಲಿರುವ ಶ್ರೀ ಸಾಗರಕಟ್ಟೆ ರಾಯರ ಮಠದಲ್ಲಿ ಉತ್ತರಾರಾಧನೆ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನೆರವೇರಿತು. ಸಂಜೆ ವಿದ್ವಾನ್‌ಸಮರ್ಥ ರಘುನಂದನ್‌ತಂಡದಿಂದ ಗಾಯನ ಪ್ರಸ್ತುತಪಡಿಸಿದರು.

ಎಲ್ಲ ಮಠಗಳಲ್ಲಿ ಸಾವಿರಾರು ಭಕ್ತಾದಿಗಳು ಮೂರು ದಿನಗಳ ಕಾಲ ಶ್ರೀ ಗುರುರಾಘವೇಂದ್ರ ರಾಯರ ದರ್ಶನ ಪಡೆದು, ತಮ್ಮ ಇಷ್ಟಾರ್ಥ ಈಡೇರಿಸುವಂತೆ ಸ್ಮರಿಸಿದರು. ಮೂರು ದಿನಗಳ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವು ಭಕ್ತಾದಿಗಳ ಸಹಕಾರದಿಂದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ವಿಜೃಂಭಣೆಯಿಂದ ನೆರವೇರಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

- ರಾಘವೇಂದ್ರ ಕುಲಕರ್ಣಿ, ವ್ಯವಸ್ಥಾಪಕರು, ಶ್ರೀ ರಾಘವೇಂದ್ರಸ್ವಾಮಿಗಳವರ ಮಠ, ಸುಬ್ಬರಾಯನಕೆರೆ, ಮೈಸೂರು.