ಸಾರಾಂಶ
ಹುಬ್ಬಳ್ಳಿ: ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಬುಧವಾರ ನಗರದಾದ್ಯಂತ ಶ್ರೀರಾಮನ ಭಕ್ತರು ವೈಭವದಿಂದ ವಿಶೇಷ ಪೂಜೆ, ತೊಟ್ಟಿಲೋತ್ಸವ, ಅಲಂಕಾರೋತ್ಸವದ ಮೂಲಕ ಆಚರಿಸಿದರು. ನಗರದ ಶ್ರೀರಾಮ ಮಂದಿರ ಸೇರಿದಂತೆ ವಿವಿಧ ಮಂದಿರಗಳಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು.
ಇಲ್ಲಿನ ಹಳೆ ಕೋರ್ಟ್ ವೃತ್ತದ ಬಳಿ ಇರುವ ಶ್ರೀ ಸಾಯಿ ಮಂದಿರದಲ್ಲಿ ವಿಶೇಷ ತೊಟ್ಟಿಲೋತ್ಸವ ನೆರವೇರಿತು. ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಶ್ರೀ ಸಾಯಿ ಬಾಬಾಗೆ ವಿಶೇಷ ಅಲಂಕಾರ ಮಾಡಲಾಯಿತು. ಮಂದಿರಕ್ಕೆ ಬೆಳ್ಳಂಬೆಳಗ್ಗೆಯೇ ಸಾವಿರಾರು ಮಂದಿ ಪಾಲ್ಗೊಂಡು ದೇವರ ದರ್ಶನ ಪಡೆದರು.ಕಮರಿಪೇಟೆಯ ಶ್ರೀರಾಮ ಮಂದಿರದಲ್ಲಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರಿಂದ ನಡೆದ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ದಾಜಿಬಾನ್ ಪೇಟೆಯ ಗೌಳಿಗಲ್ಲಿಯ ಶ್ರೀರಾಮ ಮಂದಿರದಲ್ಲಿ ಬೆಳಗ್ಗೆಯಿಂದ ವಿಶೇಷ ರಾಮನಾಮಸ್ತುತಿಯ ಭಜನೆ ನಡೆಯಿತು. ನೇಕಾರ ನಗರದ ಪ್ರಸನ್ನ ಆಂಜನೇಯ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನೆರವೇರಿತು. ನಾಗಶೆಟ್ಟಿಕೊಪ್ಪದ ಹನುಮಾನ ಮಂದಿರದಲ್ಲೂ ಭಕ್ತರಿಂದ ವಿಶೇಷ ಅಭಿಷೇಕ, ಶ್ರೀರಾಮ ನಾಮಸ್ಮರಣೆ ನಡೆಯಿತು. ಗೋಪನಕೊಪ್ಪದಲ್ಲಿ ಶ್ರೀರಾಮ ಹಾಗೂ ಹನುಮಂತ ಮೂರ್ತಿಯ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಇಲ್ಲಿನ ದಾಜಿಬಾನ್ ಪೇಟನ ಶ್ರೀ ದುರ್ಗಾದೇವಿ ದೇವಸ್ಥಾನದ ಶ್ರೀ ಹರಿ ವಿಠಲ ಪಾಂಡುರಂಗ ಶ್ರೀ ರುಕ್ಮಾಯಿ ದೇವಸ್ಥಾನದಲ್ಲಿ ಬುಧವಾರ ಶ್ರೀ ರಾಮನವಮಿ ನಿಮಿತ್ತ ಶ್ರೀ ಹರಿ ಪಾಂಡುರಂಗ ವಿಠ್ಠಲ ದೇವರಿಗೆ ತೊಟ್ಟಿಲೋತ್ಸವ ಪೂಜೆ ನೆರವೇರಿತು. ದೇವಸ್ಥಾನದಲ್ಲಿ ನೂರಾರು ಸುಮಂಗಲೆಯರು ಸೇರಿ ಶ್ರೀಹರಿ ವಿಠ್ಠಲ ಪಾಂಡುರಂಗ ದೇವರಿಗೆ ತೊಟ್ಟಿಲು ತೂಗಿ ಜೋಗುಳ ಹಾಡಿದರು.ಕೇಶ್ವಾಪುರ, ದಾಜಿಬಾನ್ ಪೇಟೆ, ದುರ್ಗದಬೈಲ್ ವೃತ್ತ, ಹಳೇ ಹುಬ್ಬಳ್ಳಿ, ವಿದ್ಯಾನಗರ, ಶಿರೂರ ಪಾರ್ಕ್, ಆರ್.ಎನ್. ಶೆಟ್ಟಿ ರಸ್ತೆಯ ರಾಜೇಂದ್ರ ನಗರ, ಶಿವಾಜಿ ನಗರದಲ್ಲಿ ಶ್ರೀರಾಮನ ಬೃಹತ್ ಕಟೌಟ್‌ಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಇದಲ್ಲದೇ ನಗರದ ಹಲವು ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕ, ತೊಟ್ಟಿಲೋತ್ಸವ, ಎಲೆಪೂಜೆ, ಭಜನೆ, ಶ್ರೀರಾಮ ಪಠಣ ಸೇರಿದಂತೆ ಹಲವು ಕಾರ್ಯಕ್ರಮಗಳು ನೆರವೇರಿದವು. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನಪ್ರಸಾದ, ಮಜ್ಜಿಗೆ, ಕಬ್ಬಿನ ಹಾಲು ಸೇರಿದಂತೆ ಬಗೆಬಗೆಯ ತಂಪು ಪಾನೀಯ ವಿತರಿಸಲಾಯಿತು.