ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀರಾಮ ತೊಟ್ಟಿಲೋತ್ಸವ

| Published : Apr 18 2024, 02:20 AM IST

ಸಾರಾಂಶ

ಶ್ರೀರಾಮ ಎಲ್ಲರ ಬದುಕಿಗೂ ಆದರ್ಶ ಮತ್ತು ಪೂಜ್ಯನೀಯವಾಗಿದ್ದು ಶ್ರೀರಾಮ ನಾಮ ಜಪದಿಂದ ಕಷ್ಟಗಳು ಪರಿಹಾರವಾಗಿ ಸುಖ-ನೆಮ್ಮದಿಯ ಬದುಕು ನಮ್ಮದಾಗುತ್ತದೆ

ಲಕ್ಷ್ಮೇಶ್ವರ: ಪಟ್ಟಣದ ಶ್ರೀಶಂಕರ ಭಾರತಿಮಠದಲ್ಲಿ ಬ್ರಹ್ಮವೃಂದದ ಪರವಾಗಿ ಬುಧವಾರ ಶ್ರೀರಾಮ ನವಮಿ ನಿಮಿತ್ತ ಶ್ರೀರಾಮನ ತೊಟ್ಟಿಲೋತ್ಸವ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.

ಶ್ರೀಮಠದಲ್ಲಿ ಸೇರಿದ್ದ ಸುಮಂಗಲೆಯರು ಶ್ರೀರಾಮ ಸ್ವರೂಪಿ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಭಕ್ತಿಯಿಂದ ತೂಗಿ ರಾಮನಾಮದ ಭಕ್ತಿಗೀತೆ ಹಾಡಿದರು. ಶಂಕರಭಾರತಿಮಠದಲ್ಲಿ ಶ್ರೀರಾಮ ಜಯ ರಾಮ ಜಯ ಜಯ ರಾಮ ಜಪ ರಿಂಗಣಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಾಲಚಂದ್ರಭಟ್ ಹುಲಮನಿ ಅವರು, ಧರ್ಮ ಸಂಸ್ಥಾಪನೆಗಾಗಿ ಮರ್ಯಾದಾ ಪುರುಷೋತ್ತಮನಾಗಿ ಅವತಾರವೆತ್ತಿದ ಶ್ರೀರಾಮ ಸಾಕ್ಷಾತ್ ದೇವರೇ ಆಗಿದ್ದಾನೆ. ಸೂರ್ಯವಂಶಸ್ಥನೆ ಆದ ಶ್ರೀರಾಮನು ಕಾಲಾತೀತ, ಗುಣಾತೀತನಾಗಿದ್ದು ಶ್ರೀರಾಮನೇ ಮೂಲವಾಗಿರುವ ರಾಮಾಯಣದ ಪ್ರಸಂಗಗಳು ಬದುಕಿಗೆ ಆದರ್ಶವಾಗಿವೆ.ಶ್ರೀರಾಮ ಎಲ್ಲರ ಬದುಕಿಗೂ ಆದರ್ಶ ಮತ್ತು ಪೂಜ್ಯನೀಯವಾಗಿದ್ದು ಶ್ರೀರಾಮ ನಾಮ ಜಪದಿಂದ ಕಷ್ಟಗಳು ಪರಿಹಾರವಾಗಿ ಸುಖ-ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎಂದು ಹೇಳಿದರು.

ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ಮಾತನಾಡಿ, ಅಯೋಧ್ಯೆ ರಾಮಮಂದಿರ ಉದ್ಘಾಟನೆ ನಿಮಿತ್ತ ಇಲ್ಲಿನ ಬ್ರಾಹ್ಮಣ ಸಮಾಜ ಒಂದು ಕೋಟಿ ರಾಮನಾಮ ತಾರಕ ಮಂತ್ರದ ಜಪಯಜ್ಞ ಯಶಸ್ವಿಯಾಗಿ ನೆರವೇರಿಸಿದ್ದು ಎಲ್ಲರ ಗಮನ ಸೆಳೆಯುವಂತಾಗಿತ್ತು. ಬ್ರಾಹ್ಮಣ ಸಮಾಜದ ಜತೆ ಇತರೆ ಎಲ್ಲ ಸಮಾಜ ಬಾಂಧವರು ಅಂದಿನ ರಾಮತಾರಕ ಯಜ್ಞ ಯಶಸ್ವಿಗೊಳಿಸಲು ಸಹಕರಿಸಿದ್ದು,ಅದೇ ರೀತಿ ಇಂದು ಶ್ರೀರಾಮ ನವಮಿ ಸಂಪ್ರದಾಯದಂತೆ ಆಚರಿಸಲಾಗಿದೆ ಎಂದರು.

ಬಳಿಕ ಸೇರಿದ್ದವರಿಗೆ ಪಾನಕ, ಕೋಸುಂಬರಿ ಪ್ರಸಾದ ವಿತರಿಸಲಾಯಿತು. ಬ್ರಾಹ್ಮಣ ಸಮಾಜದ ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.