ಸಾರಾಂಶ
ಗದಗ: ಅವಳಿ ನಗರದ ವಿವಿಧೆಡೆ ಭಾನುವಾರ ಅದ್ಧೂರಿಯಾಗಿ ಶ್ರೀರಾಮ ನವಮಿ ಆಚರಿಸಲಾಯಿತು.
ನಗರದ ಕುಷ್ಟಗಿ ಚಾಳದಲ್ಲಿರುವ ಐತಿಹಾಸಿಕ ಶ್ರೀರಾಮ ಮಂದಿರದಲ್ಲಿ ಪ್ರಾಥಃಕಾಲದಲ್ಲಿ ಶ್ರೀ ಲಕ್ಷ್ಮಣ, ಸೀತಾಮಾತಾ ಸಮೇತ ವೇದೋಕ್ತ ಮಂತ್ರಪುಷ್ಪಾಂಜಲಿಗಳಿಂದ ಶ್ರೀರಾಮನಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು.ನಂತರ ದೇವಸ್ಥಾನದಲ್ಲಿರುವ ಆಂಜನೇಯ, ಗಣಪತಿ, ನವಗ್ರಹ ದೇವತೆಗಳು ಹಾಗೂ ಈಶ್ವರ ದೇವರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ರಾಮತಾರಕ ಹೋಮವನ್ನು ಮಾಡಿ, ಶ್ರೀರಾಮನನ್ನು ತೊಟ್ಟಿಲಿಗೆ ಹಾಕಲಾಯಿತು. ಬಂದ ಭಕ್ತರಿಗೆ ಕೋಸಂಬ್ರಿ ಹಾಗೂ ಪಾನಕವನ್ನು ವಿತರಿಸಲಾಯಿತು.ಬೆಳಗ್ಗೆಯಿಂದಲೇ ಶ್ರದ್ಧಾಭಕ್ತಿಯಿಂದ ರಾಮಮಂದಿರಕ್ಕೆ ಮಹಿಳೆಯರು, ಮಕ್ಕಳು ಸೇರಿದಂತೆ ಭಕ್ತರೆಲ್ಲರೂ ಆಗಮಿಸಿ, ಶ್ರೀರಾಮನಿಗೆ ಭಕ್ತಿ ಸಮರ್ಪಿಸಿದರು. ಹೂ, ಹಣ್ಣು, ಕಾಯಿ ಕರ್ಪೂರ ಅರ್ಪಿಸಿ ರಾಮಾರಾಧನೆಯಲ್ಲಿ ತಲ್ಲೀನರಾದರು.
ಶ್ರೀರಾಮಚಂದ್ರನಿಗೆ ಜೈ ಜೈ ಎಂದು ಉಧ್ಘಾರ ಹಾಕುತ್ತಾ ಜೋಗುಳ ಹಾಡಿ ಲಾಲಿ ಸುವ್ವಾಲಿ ಎಂದು ಶ್ರೀರಾಮನನ್ನು ತೊಟ್ಟಿಲಿಗೆ ಹಾಕಿ ತೂಗಿದ ಮುತ್ತೈದೆಯರು ಜೋ ಜೋ ರಘುರಾಮ ಹೇ ರಘುರಾಮ ಎಂದು ರಾಮ ಸ್ಮರಣೆ ಮಾಡಿದರು.ಈ ಸಂದರ್ಭದಲ್ಲಿ ನವೀನ ಕುಷ್ಟಗಿ ಮಾತನಾಡಿ, ನಮ್ಮ ಪೂರ್ವಜರಾದ ರಾಮಚಂದ್ರಪ್ಪ ಅಡಿವೆಪ್ಪ ಕುಷ್ಟಗಿ ಹಾಗೂ ತಾರಾಬಾಯಿ ಕಷ್ಟಗಿ ದಂಪತಿ 1930ರಲ್ಲಿ ಸ್ಥಾಪಿಸಿದ ದೇವಸ್ಥಾನ ಇದಾಗಿದ್ದು, ಇಂದಿಗೂ ಈ ದೇವಸ್ಥಾನ ಜಾಗೃತವಾಗಿದೆ. ಜೊತೆಗೆ ಭಕ್ತರ ಸಹಕಾರ ಬಹುಮುಖ್ಯವಾಗಿದ್ದು ಇಂದಿಗೂ ಇಲ್ಲಿ ಧಾರ್ಮಿಕ ಆಚರಣೆಗಳು ನಿರಂತರವಾಗಿವೆ. ಇದಕ್ಕೆ ಕುಷ್ಟಗಿ ಚಾಳದ ಹಿರಿಯರು ಹಾಗೂ ಸದ್ಭಕ್ತರೇ ಕಾರಣ ಎಂದರು.ಈ ಸಂದರ್ಭದಲ್ಲಿ ಮಂದಿರದ ಪ್ರಧಾನ ಅರ್ಚಕ ದಿವಾಕರ ಭಟ್ ದೀಕ್ಷಿತ, ಮಾರ್ತಾಂಡ ದೀಕ್ಷಿತ, ಅಕ್ಷಯ ದೀಕ್ಷಿತ, ವಿನಾಯಕ ದೀಕ್ಷಿತ, ಶ್ರೀ ಕೋದಂಡರಾಮ ಕುಷ್ಟಗಿ, ನವೀನ ಕುಷ್ಟಗಿ, ವೈಶಾಖ ಕುಷ್ಟಗಿ, ಕಾರ್ತಿಕ ಕುಷ್ಟಗಿ, ರಘುನಾಥ ಹರ್ಲಾಪೂರ, ಆನಂದ ಗೋಡಬೊಲೆ, ವಿಭಾ ದೇಸಾಯಿ ಸೇರಿದಂತೆ ಓಣಿಯ ಗುರು-ಹಿರಿಯರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.