ಆಂದೋಲಾ ಶ್ರೀಗಳ ಕೊಲೆ ಸಂಚು: ಶ್ರೀರಾಮ ಸೇನೆ ಪ್ರತಿಭಟನೆ

| Published : Jan 04 2025, 12:32 AM IST

ಸಾರಾಂಶ

Sri Rama Sena protests against conspiracy to murder Andola Sri

-ರಾಜೂ ಕಪನೂರು ಬೆಂಬಲಕ್ಕೆ ನಿಂತ ಸಚಿವ ಪ್ರಿಯಾಂಕ ಖರ್ಗೆ ವಜಾಗೊಳಿಸಿ: ಶ್ರೀರಾಮ ಸೇನೆ ಒತ್ತಾಯ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಕಲ್ಯಾಣ ಕರ್ನಾಟಕದ ಹಿಂದೂ ಧರ್ಮದ ಗುರುಗಳು ಹಾಗೂ ಧರ್ಮ ಮಾರ್ಗದರ್ಶಕರಾದ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಕೊಲೆಗೆ ಸಂಚು ರೂಪಿಸಲಾಗಿರುವ ರಾಜು ಕಪನೂರು, ಸಚಿವ ಪ್ರಿಯಾಂಕ ಖರ್ಗೆ ಆಪ್ತನಾಗಿದ್ದು, ಈ ಕೂಡಲೇ ಸಚಿವ ಸ್ಥಾನದಿಂದ ಪ್ರಿಯಾಂಕ ಅವರನ್ನು ವಜಾ ಮಾಡುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಶಶಾಂಕ ನಾಯಕ, ಧರ್ಮ ರಕ್ಷಣೆ ಹಾಗೂ ಸಂಸ್ಕೃತಿ ಪರಂಪರೆ ಮೇಲೆ ದಾಳಿಗಳಾದಾಗ ಅವುಗಳ ವಿರುದ್ಧ ಸಿಡಿದೆದ್ದು ನಿಲ್ಲುವ ಆಂದೋಲಾ ಶ್ರೀಗಳ ಕೊಲೆಗೆ ಸಂಚು ಮಾಡಿರುವ ಸಂಗತಿ ಗುತ್ತಿಗೆದಾರ ಸಚಿನ್ ಪಾಂಚಾಳ ಅವರ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್ ನಿಂದ ಬಯಲಾಗಿದೆ ಎಂದರೆ ರಾಜ್ಯದಲ್ಲಿ ಎಂತಹ ಆಡಳಿತ ನೀಡುತ್ತಿದೆ. ಈ ಸರ್ಕಾರ ಎಂಬುದು ಜಗಜ್ಜಾಹೀರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಸಾಮಾನ್ಯರಿಗೆ, ಗುತ್ತಿಗೆದಾರರಿಗೆ ಕೊಲೆ ಬೆದರಿಕೆ ಹಾಕುವ ಒಬ್ಬ ರೌಡಿಯನ್ನು ಇಟ್ಟುಕೊಂಡು ಕಲಬುರಗಿಯಲ್ಲಿ ಭಯದ ವಾತಾವರಣ ನಿರ್ಮಿಸಿ, ಇನ್ನಿಲ್ಲದ ಕಿರುಕುಳ ನೀಡುತ್ತಿರುವ ಸಚಿವ ಪ್ರಿಯಾಂಕ ಖರ್ಗೆ, ಯುಪಿ ಬಿಹಾರ ಮಾದರಿಯ ಕಡೆಗೆ ಕಲ್ಯಾಣ ಕರ್ನಾಟಕದ ಕಲುಬುರಗಿಯನ್ನು ಒಯ್ಯುತ್ತಿರುವುದು ಆತಂಕಕಾರಿ ಸಂಗತಿ ಎಂದು ಪ್ರತಿಭಟನಾಕಾರರು ದೂರಿದರು.

ಕಲ್ಯಾಣ ಕರ್ನಾಟಕ ಅಧ್ಯಕ್ಷ ವಿಜಯ ಪಾಟೀಲ್ ಮಾತನಾಡಿ, ರೌಡಿ ರಾಜ್ಯ ಮಾಡಲು ಹೊರಟಿರುವ ಸಚಿವ ಪ್ರಿಯಾಂಕ ಖರ್ಗೆಯನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಈ ಪ್ರಕರಣ ಸಿಐಡಿ ತನಿಖೆ ಮಾಡಿದರೆ, ಅದು ಸಚಿವನಿಗೆ ಕ್ಲೀನ್ ಚೀಟ್ ಕೊಡುವ ಏಜನ್ಸಿಯಂತಾಗುತ್ತದೆ. ಆ ಮೂಲಕ ಕಲಬುರಗಿಯಲ್ಲಿ ಗೂಂಡಾರಾಜ್ ಗೆ ಸರ್ಕಾರವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏಕದಂಡಗಿ ಮಠದ ಶ್ರೀಕುಮಾರ ಮಹಾಸ್ವಾಮೀಜಿ, ಶ್ರೀರಾಮ ಸೇನೆ ಜಿಲ್ಲಾ ಉಪಾಧ್ಯಕ್ಷ ಅಂಬರೀಶ್ ತಡಿಬಿಡಿ, ಪ್ರಧಾನ ಕಾರ್ಯದರ್ಶಿ ಸಂದೀಪ ಮಹೇಂದ್ರಕರ್, ಯುವ ಘಟಕದ ಅಧ್ಯಕ್ಷ ರಘುರಾಮ್, ನಗರಾಧ್ಯಕ್ಷ ಹಣಮಂತ್ರಾಯ ಪಾಟೀಲ್, ತಾಲೂಕಾಧ್ಯಕ್ಷ ಬಸವರಾಜ ಮನಗನಾಳ, ಉಪಾಧ್ಯಕ್ಷ ಮಲ್ಲಿಕಾರ್ಜುನ ವರ್ಕನಳ್ಳಿ, ಸುಭಾಷ್ ದೇವದುರ್ಗ, ಪಿಲ್ಲಿಂಗ ಅಂಬಿಗೇರ, ಮಹಾಂತೇಶ ವರ್ಕನಳ್ಳಿ, ಶಿವಾನಂದ ಮುಂಡರಗಿ, ಸುರೇಶ ರಾಯಚೂರು ಸೇರಿದಂತೆ ಸೇನೆ ಕಾರ್ಯಕರ್ತರು ಇದ್ದರು. ಬಳಿಕ ತಹಸೀಲ್ದಾರರ ಮುಖಾಂತರ ಗೃಹಸಚಿವರಿಗೆ ಮನವಿ ಸಲ್ಲಿಸಲಾಯಿತು.

-------

ಫೋಟೊ: ಯಾದಗಿರಿಯಲ್ಲಿ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಅವರ ಕೊಲೆಗೆ ಸಂಚು ಖಂಡಿಸಿ ತಕ್ಷಣ ಪ್ರಿಯಾಂಕ ಖರ್ಗೆಯವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

3ವೈಡಿಆರ್7