ಹುಬ್ಬಳ್ಳಿ:
ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿರುವುದನ್ನು ಖಂಡಿಸಿ ಶ್ರೀರಾಮಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ನಡೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರ ಮಧು ಬಂಗಾರಪ್ಪ ಅವರ ವಿರುದ್ಧ ಘೋಷಣೆ ಕೂಗಿದರು. ಹಿಜಾಬ್ ಧರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಶಿಕ್ಷಣ ಸಚಿವರ ಮಧು ಬಂಗಾರಪ್ಪ ಅವರ ಭಾವಚಿತ್ರ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯ ಮತ ಬ್ಯಾಂಕ್ ಹಾಗೂ ಓಲೈಕೆಗಾಗಿ 2022ರಲ್ಲಿ ಶಾಲಾ-ಕಾಲೇಜ್‌ಗಳಲ್ಲಿ ವಸ್ತ್ರ ಸಂಹಿತೆ ನಿಗದಿಪಡಿಸಿದ ಬಿಜೆಪಿ ಆದೇಶ ವಾಪಸ್ ಪಡೆದಿದ್ದು, ಇದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೇಸ್ ದಾಖಲಿಸುತ್ತೇವೆ:
ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿ, ಮುಸ್ಲಿಂ ಮತ ಬ್ಯಾಂಕ್ ಸಲುವಾಗಿ ಇಡೀ ಶಿಕ್ಷಣ ವ್ಯವಸ್ಥೆ ಬಲಿ ಕೊಡುವ ಕೆಲಸ ಸರ್ಕಾರ ಮಾಡಿದೆ. ಈ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದು, ಹಿಂಪಡೆಯುವ ಮೂಲಕ ಕಾನೂನು ಉಲ್ಲಂಘನೆ ಮಾಡಿದೆ. ಶ್ರೀರಾಮಸೇನೆ ಸಿಎಂ ಹಾಗೂ ಶಿಕ್ಷಣ ಸಚಿವರ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುತ್ತೇವೆ ಎಂದು ತಿಳಿಸಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಮವಸ್ತ್ರ ಮಹತ್ವ ಗೊತ್ತಿಲ್ಲ. ಇವರ ರಾಜಕೀಯ ಹಿತಾಸಕ್ತಿಯಿಂದ ವಿದ್ಯಾರ್ಥಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಜಾಬ್ ಹಾಕಿಕೊಂಡು ಬಂದಲ್ಲಿ ಕೇಸರಿ ವಸ್ತ್ರ ಹಾಕಿಕೊಂಡು ಹೋಗಿ ಎಂದು ಕರೆ ಕೊಟ್ಟ ಮುತಾಲಿಕ್, ಮುಸ್ಲಿಂ ಸಮುದಾಯದ ಓಲೈಕೆ ಮಾಡುತ್ತಿರುವ ಸರ್ಕಾರ ಆ ಸಮುದಾಯಕ್ಕೆ ₹ 600 ಕೋಟಿ ನೀಡುತ್ತಿದೆ. ಈಗ ಹಿಜಾಬ್ ಧರಿಸಲು ಅನುಮತಿ ನೀಡಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಸರ್ಕಾರ ಒಡೆಯುತ್ತಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮಂಜುನಾಥ ಕಾಟಕರ, ಪ್ರವೀಣ ಮಾಳದಕರ, ರಘು ಯಲ್ಲಕ್ಕನವರ, ಗುಣಧರ ದಡೋತಿ ಸೇರಿದಂತೆ ಅನೇಕರಿದ್ದರು.