ಸಾರಾಂಶ
ರಾಮರಾಜ್ಯದ ಕನಸು ನನಸಾಗಬೇಕಾಗಿದ್ದು, ಇಂದು ನಾವು ರಾಮರಾಜ್ಯವಾಗಲು ರಾಜರ ಆಡಳಿತದಲ್ಲಿ ಇಲ್ಲ.
ಹೊಸಪೇಟೆ: ರಾಮರಾಜ್ಯ ನಿರ್ಮಾಣವಾಗಬೇಕೆಂದರೆ ಪ್ರತಿಯೊಬ್ಬರೂ ಶ್ರೀರಾಮನ ಆದರ್ಶ ಪಾಲನೆ ಮಾಡಬೇಕು ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ವಿಶ್ವಪ್ರಸನ್ನತೀರ್ಥ ಶ್ರೀ ಹೇಳಿದರು.
ಶನಿವಾರ ನಗರದ ಶ್ರೀಕೃಷ್ಣ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮರಾಜ್ಯದ ಕನಸು ನನಸಾಗಬೇಕಾಗಿದ್ದು, ಇಂದು ನಾವು ರಾಮರಾಜ್ಯವಾಗಲು ರಾಜರ ಆಡಳಿತದಲ್ಲಿ ಇಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆ ನಿರ್ವಹಿಸುವ ಮೂಲಕ ರಾಮರಾಜ್ಯದ ಕನಸು ಸಾಕಾರಗೊಳಿಸಬೇಕು. ಪ್ರತಿಯೊಬ್ಬ ಪ್ರಜೆಯೂ ಶ್ರೀರಾಮನಾಗಬೇಕು. ಉತ್ತಮ ಚಾರಿತ್ರ‍್ಯ ಬೆಳೆಸಿಕೊಂಡು ಇತರರು ಉತ್ತಮ ಕಾರ್ಯ ನಿರ್ವಹಣೆಗೆ ಪ್ರೇರಣೆ ನೀಡುವ ಮೂಲಕ ರಾಮರಾಜ್ಯ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.ಜ. 22ರಂದು ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನಂತರ ದೇಶದಲ್ಲಿ ಧರ್ಮಜಾಗೃತಿಯ ಪರ್ವ ಆರಂಭವಾಗಿದೆ. ರಾಮಮಂದಿರ ನಿರ್ಮಾಣವಾದ ಮೇಲೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಧ್ಯಾತ್ಮದ ಕಡೆ ಹೆಚ್ಚು ಒಲವು ವ್ಯಕ್ತವಾಗುತ್ತಿದೆ. ಇದು ಹೊಸ ವಾತಾವರಣ ನಿರ್ಮಾಣ ಮಾಡಲು ಸಹಕಾರಿಯಾಗಲಿದೆ. ಧರ್ಮ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಶುದ್ಧೀಕರಣಕ್ಕೆ ಅಣಿಯಾಗಿದೆ ಎಂದರು.
ಮುಖಂಡರಾದ ನರಸಿಂಹ ಆಚಾರ್ಯ, ಗುರುರಾಜ, ರಾಮಚಂದ್ರ ಪ್ರಸಾದ್, ವಾದಿರಾಜ ಭಟ್, ಶಿವಪ್ರಸಾದ, ರಾಘವೇಂದ್ರ ಸೋಮಯಾಜಿ ಮತ್ತಿತರರಿದ್ದರು.