ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಅದ್ಧೂರಿ ಮೆರವಣಿಗೆ ನಡೆಯಿತು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಅದ್ಧೂರಿ ಮೆರವಣಿಗೆ ನಡೆಯಿತು. ಪೂಜಾ ಮಂಟಪದಿಂದ ಶ್ರೀ ಸತ್ಯಗಣಪತಿಯವರನ್ನು ಪುಷ್ಟ ಮಂಟಪದಲ್ಲಿ ಕೂರಿಸಿ ಚಿತ್ರಕಲಾ ಸಮಿತಿ ಮತ್ತು ಗಜಕೇಸರಿ ಯುವ ಪಡೆ ವತಿಯಿಂದ ವಿಶೇಷವಾದ ಬೃಹತ್ ಹೂವಿನ ಹಾರವನ್ನು ದೇವರಿಗೆ ಸಮರ್ಪಿಸಲಾಯಿತು. ರಾತ್ರಿ 12 ಗಂಟೆಯ ವೇಳೆಗೆ ಆಸ್ಥಾನ ಮಂಟಪದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ಹಲವಾರು ಜನಪದ ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿದವು.ಈ ಸಂದರ್ಭದಲ್ಲಿ ಕೀಲು ಕುದುರೆ, ನೃತ್ಯ, ನಯ್ಯಾಂಡಿ ನೃತ್ಯ, ತಮಟೆ, ಚಿಟ್ಟಿಮೇಳ, ಮೂವಿಂಗ್ ಆರ್ಕೆಸ್ಟ್ರಾ. ಚಂಡೆ ವಾದ್ಯ, ಭದ್ರಕಾಳಿ ಕುಣಿತ ಸೇರಿದಂತೆ ಹತ್ತಾರು ಜಾನಪದ ಕಲಾಮೇಳಗಳು ಮೇಳೈಸಿದ್ದವು. ಸಹಸ್ರಾರು ಮಂದಿ ಈ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಹಲವಾರು ವರ್ತಕರು ತಮ್ಮ ಅಂಗಡಿ ಮತ್ತು ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಮೆರವಣಿಗೆ ಬಹಳ ಶಾಂತಿಯುತವಾಗಿ ನಡೆಯಿತು. ಭಾರಿ ಸಿಡಿಮದ್ದಿನ ಪ್ರದರ್ಶನದೊಂದಿಗೆ ರಾತ್ರಿ ಪಟ್ಟಣದ ಕೆರೆಕೋಡಿಯಲ್ಲಿ ಸತ್ಯಗಣಪತಿಯನ್ನು ವಿಸರ್ಜಿಸಲಾಯಿತು. ತಹಸೀಲ್ದಾರ್ ಎನ್. ಎ. ಕುಂಇ ಅಹಮದ್, ಸಿಪಿಐ ಲೋಹಿತ್, ಎಸೈ ಮೂರ್ತಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಕಾರ್ಯದರ್ಶಿ ನಾಗರಾಜು, ಟಿ.ಎನ್.ಸತೀಶ್, ಚಂದ್ರಯ್ಯ, ಉಮೇಶ್, ಶಶಾಂಕ್, ಸಂಗಲಾಪುರ ಶಿವಣ್ಣ, ಇತರರಿದ್ದರು.