ಜಾತ್ಯಾತೀತ ಪರಂಪರೆ ಬೆಳೆಸಿದ ತೋಂಟದ ಸಿದ್ಧಲಿಂಗ ಶ್ರೀ

| Published : Apr 26 2024, 12:50 AM IST

ಜಾತ್ಯಾತೀತ ಪರಂಪರೆ ಬೆಳೆಸಿದ ತೋಂಟದ ಸಿದ್ಧಲಿಂಗ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಹೊರಟ್ಟಿಯವರ ಸೇವಾ ಕಾರ್ಯ ನಾನು ಹತ್ತಿರದಿಂದ ನೋಡಿದ್ದೇನೆ, ಅವರು ಯಾವುದೇ ರಾಜಕೀಯ ಪಕ್ಷ ಪ್ರತಿನಿಧಿಸಿದರೂ ಆ ಪಕ್ಷಗಳ ವ್ಯಾಪ್ತಿ ಮೀರಿ ಜನರ ಅಭಿಮಾನ ಗಳಿಸಿದ್ದಾರೆ

ಗದಗ: ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನನ್ನ ಕಾರ್ಯಗಳಿಗೆ ಪ್ರೇರಣೆಯಾಗಿದ್ದರು, ಈ ರಾಜ್ಯದಲ್ಲಿ ಜಾತ್ಯಾತೀತ ಪರಂಪರೆ ಹೆಮ್ಮರವಾಗಿ ಬೆಳೆಸಿದ ಕೀರ್ತಿ ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ತೋಂಟದಾರ್ಯ ಮಠದ ಜಾತ್ರಾ ಮಹಾರಥೋತ್ಸವದ ನಂತರ ಜರುಗಿದ ವೇದಿಕೆ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿ ಮಾತನಾಡಿದ ಅವರು, ಅನೇಕ ಜನರು ಬದುಕಿದರೂ ಸತ್ತಂತಿರುತ್ತಾರೆ, ಆದರೆ ಕೆಲವೇ ಮಹಾತ್ಮರು ಸಿದ್ಧಲಿಂಗ ಸ್ವಾಮಿಗಳಂತೆ ಅಗಲಿಕೆಯ ನಂತರವೂ ತಮ್ಮ ಕೈಂಕರ್ಯಗಳ ಮೂಲಕ ಚಿರಸ್ಥಾಯಿಯಾಗಿರುತ್ತಾರೆ. ನನ್ನ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಸಹಾಯ ಕೇಳಿಕೊಂಡು ಬಂದ ಅಸಂಖ್ಯ ಜನರಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ, ದೇವರು ಹಾಗೂ ನನ್ನ ಶಿಕ್ಷಕ ಸಮೂಹ ಕೊಟ್ಟ ಅಧಿಕಾರವನ್ನು ಜನ ಸೇವೆಗೆ ಬಳಸಿದ್ದೇನೆ. ನನ್ನನ್ನು ಸತತವಾಗಿ ಎಂಟು ಬಾರಿ ವಿಧಾನ ಪರಿಷತ್ತಿಗೆ ಆರಿಸಿ ಕಳುಹಿಸಿದ ಶಿಕ್ಷಕ ಸಮೂಹಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಹೊರಟ್ಟಿಯವರ ಸೇವಾ ಕಾರ್ಯ ನಾನು ಹತ್ತಿರದಿಂದ ನೋಡಿದ್ದೇನೆ, ಅವರು ಯಾವುದೇ ರಾಜಕೀಯ ಪಕ್ಷ ಪ್ರತಿನಿಧಿಸಿದರೂ ಆ ಪಕ್ಷಗಳ ವ್ಯಾಪ್ತಿ ಮೀರಿ ಜನರ ಅಭಿಮಾನ ಗಳಿಸಿದ್ದಾರೆ. ಶಿಕ್ಷಕರೇ ಅವರ ಶ್ರೀರಕ್ಷೆಯಾಗಿದ್ದು, ಅವರ ಹಿತಕ್ಕಾಗಿ ಅನೇಕ ಸರ್ಕಾರಿ ನೀತಿ-ನಿಯಮ ಪಟ್ಟು ಹಿಡಿದು ಹೊರಟ್ಟಿಯವರು ಪರಿಷ್ಕರಿಸಿದ್ದಾರೆ. ಹೊರಟ್ಟಿಯವರಂತೆ ಕಟಿಬದ್ಧರಾಗಿ ಕೆಲಸ ಮಾಡುವ ಮನೋಭಾವ ಇಂದಿನ ಶಾಸಕರಿಗೆ ಅವಶ್ಯವಿದ್ದು, ಇದಕ್ಕಾಗಿ ಹೊರಟ್ಟಿಯವರ ಕುರಿತು ಬಿಡುಗಡೆಯಾದ ಗ್ರಂಥ ಅವರಿಗೆ ಓದಲು ನೀಡಬೇಕು. ಜನಸೇವೆ ಮಾಡುವರರನ್ನು ಸಮಾಜ ಎಂದಿಗೂ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಹೊರಟ್ಟಿಯವರೇ ನಿದರ್ಶನ ಎಂದರು.

ಈ ವೇಳೆ ಡಾ. ಎಂ.ಎಂ ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡ ಬಸವರಾಜ ಹೊರಟ್ಟಿಯವರ ಅಭಿನಂದನ ಗ್ರಂಥಗಳಾದ ಮೈಲುಗಲ್ಲುಗಳೇ ಮಾತನಾಡುತ್ತವೆ ಹಾಗೂ ದಿಟ್ಟ ಹೆಜ್ಜೆ ಗ್ರಂಥಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಮೈಲುಗಲ್ಲುಗಳೇ ಮಾತನಾಡುತ್ತವೆ ಗ್ರಂಥದ ಸಂಪಾದಕ ಡಾ. ಸಂಗಮನಾಥ ಲೋಕಾಪೂರ ಮಾತನಾಡಿ, ಶಿಕ್ಷಕರ ಸುಪುತ್ರರಾಗಿ, ಸ್ವತಃ ಶಿಕ್ಷಕರಾಗಿ ಹಾಗೂ ಶಿಕ್ಷಕರ ಪ್ರತಿನಿಧಿಯಾಗಿ ಸತತ ೮ ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿದ ಬಸವರಾಜ ಹೊರಟ್ಟಿ ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿದ್ದಾರೆ. ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಅವ್ಯವಸ್ಥೆ ಪ್ರತಿಭಟಿಸುವ, ಅಸಹಾಯಕರು ಯಾರೇ ಇದ್ದರೂ ಅವರ ಕಣ್ಣೀರೊರೆಸುವ ಸ್ವಭಾವದವರಾದ ಹೊರಟ್ಟಿಯವರಂಥ ರಾಜಕಾರಣಿಗಳು ಈ ಹಿಂದೆಯೂ ಇದ್ದಿಲ್ಲ, ಮುಂದೆಯೂ ಇಂಥ ನಾಯಕರು ಹುಟ್ಟುವುದು ಅಪರೂಪ. ಅಸಂಖ್ಯ ಜನರಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಸಹಾಯ ಮಾಡಿದ್ದರೂ ಅದನ್ನು ಹೇಳಿಕೊಂಡು ಆತ್ಮ ಪ್ರಶಂಸೆ ಮಾಡಿಕೊಳ್ಳುವ ಗುಣ ಅವರಲ್ಲಿ ಇಲ್ಲವಾದ್ದರಿಂದ ಹೊರಟ್ಟಿಯವರು ಮಾಡಿದ ಪರೋಪಕಾರಗಳು ದಾಖಲೆಯಾಗಿ ಉಳಿಯಲಿ ಎನ್ನುವ ಕಾರಣಕ್ಕೆ ಅವರ ಅಭಿಮಾನಿಗಳು ನಾವು ಸೇರಿಕೊಂಡು ಮೈಲುಗಲ್ಲುಗಳೇ ಮಾತನಾಡುತ್ತವೆ ಎಂಬ ಗ್ರಂಥ ತಯಾರು ಮಾಡಿದ್ದೇವು. ಇದರಲ್ಲಿ ಹೊರಟ್ಟಿಯವರು ಸಹಾಯದ ಅಗತ್ಯತೆ ಇರುವವರಿಗೆ ಅನೇಕ ರೀತಿಯಲ್ಲಿ ಸ್ಪಂದಿಸಿದ ಮಾನವೀಯ ಮಿಡಿತಗಳಿವೆ ಎಂದರು.

ಸಿದ್ಧಯ್ಯನಕೋಟೆ ವಿಜಯಮಹಾಂತ ಶಾಖಾಮಠದ ಶ್ರೀ ಬಸವಲಿಂಗ ಸ್ವಾಮೀಜಿಯವರನ್ನು ಪೀಠಾರೋಹಣದ ನಿಮಿತ್ತ ಸನ್ಮಾನಿಸಲಾಯಿತು. ಪಂ.ಕುಮಾರ ಮರಡೂರ ಅವರಿಂದ ವಚನ ಸಂಗೀತ, ನಾಗರತ್ನ ಹಡಗಲಿ, ಋತಿಕಾ ನೃತ್ಯ ನಿಕೇತನ ತಂಡದವರಿಂದ ವಚನ ನೃತ್ಯರೂಪಕ ಜರುಗಿತು.

ಸಾನ್ನಿಧ್ಯವನ್ನು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸಿದ್ದರು. ಕಲಬುರ್ಗಿ ಜ.ಡಾ. ಸಾರಂಗಧರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಹಾಗೂ ಡಾ.ಶಿವಾನಂದ ಸ್ವಾಮಿಗಳು ವಿರಕ್ತಮಠ ಸೊನ್ನ ಸಮ್ಮುಖ ವಹಿಸಿದ್ದರು.

ಮಾಜಿ ಸಚಿವ ಎಸ್.ಎಸ್ ಪಾಟೀಲ, ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್ ಪಟ್ಟಣಶೆಟ್ಟರ, ಡಾ. ಬಸವರಾಜ ಧಾರವಾಡ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಪ್ರೊ. ಕೆ.ಎಚ್ ಬೇಲೂರ ಸ್ವಾಗತಿಸಿದರು.